ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿರುವ ಬಿಜೆಪಿಯ ವಿ.ಸೋಮಣ್ಣ ಇದೀಗ ನರೇಂದ್ರ ಮೋದಿ 3.0 ಸಂಪುಟ ಸೇರುವುದು ಬಹುತೇಕ ನಿಚ್ಚಳವಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನವರು ಗೆದ್ದಿಲ್ಲ ಎಂಬ ಅಪವಾಧವನ್ನು ಅಳಿಸಿಹಾಕಿರುವ ಸೋಮಣ್ಣ 1.75 ಲಕ್ಷ ಭರ್ಜರಿ ಲೀಡ್ನೊಂದಿಗೆ ಗೆದ್ದು ಬೀಗಿದ್ದು ಮತ್ತೊಂದು ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಕ್ಷೇತ್ರದಿಂದ 1952 ರಿಂದ ಈವರೆಗೆ ಗೆದ್ದಿರುವ ಯಾರೊಬ್ಬರಿಗೂ ಕೇಂದ್ರ ಮಂತ್ರಿ ಸ್ಥಾನ ದೊರೆತಿರಲಿಲ್ಲ. ಸೋಮಣ್ಣ ಕೇಂದ್ರ ಮಂತ್ರಿ ಆಗುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ದಾಪುಗಾಲು ಇಟ್ಟಿದ್ದಾರೆ.
ಸೋಮಣ್ಣ ಎಂಬ ಹೆಸರಿನವನಾದ ನಾನು....
73 ವರ್ಷದ ವಿ.ಸೋಮಣ್ಣ 5 ದಶಕಗಳಿಗು ಹೆಚ್ಚು ಕಾಲ ಸಾರ್ವಜನಿಕ ಸೇವೆಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ 24/7 ರಾಜಕಾರಣಿ ! ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಮರಳವಾಡಿಯ ಲೇಟ್ ವೀರಣ್ಣ ಅವರ ಪುತ್ರ ವಿ.ಸೋಮಣ್ಣ ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು. 1983ರಲ್ಲಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸೋಮಣ್ಣ 1994ರವರೆಗೆ ಬಿಬಿಎಂಪಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಜನತಾಪಕ್ಷದ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಸೋಮಣ್ಣ ಐದು ಬಾರಿ ಶಾಸಕ, 2 ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಮೂರು ಬಾರಿ ಮಂತ್ರಿ ಆಗಿಯು ಸೇವೆ ಸಲ್ಲಿಸುವ ಅವಕಾಶ ಪಡೆದುಕೊಂಡಿದ್ದರು. 1994ರಲ್ಲಿ ಜನತಾಪಕ್ಷದಿಂದ ಬಿನ್ನಿಪೇಟೆ ಕ್ಷೇತ್ರದಿಂದ ಗೆದ್ದು ವಿಧಾನಸೌಧ ಪ್ರವೇಶಿಸಿದ ಸೋಮಣ್ಣ ಮಂತ್ರಿ ಗಿರಿ ಕೂಡ ಗಿಟ್ಟಿಸಿಕೊಂಡರು. ಬಳಿಕ ಪಕ್ಷೇತರರಾಗಿ 1999ರಲ್ಲಿ ಸ್ಪರ್ಧಿಸಿ ಪುನರಾಯ್ಕೆಯಾದರು. 2004ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಮತ್ತೆ ಬಿನ್ನಿಪೇಟೆಯಿಂದ ಗೆದ್ದು ಹ್ಯಾಟ್ರಿಕ್ ವಿಜಯ ಸಾಧಿಸಿದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ 2008ರಲ್ಲಿ ಗೋವಿಂದರಾಜನಗರದಿಂದ ಸ್ಪರ್ಧಿಸಿ ಗೆದ್ದ ಸೋಮಣ್ಣ ಆಪರೇಷನ್ ಕಮಲಕ್ಕೆ ಸಿಲುಕಿ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕ್ಷೇತ್ರ ಕಳೆದುಕೊಂಡರು. ಆ ನಂತರ ಎರಡುಬಾರಿ ವಿಧಾನಪರಿಷತ್ ಸದಸ್ಯರಾದರು. ಬಿಎಸ್ವೈ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ಕೂಡ ಗಿಟ್ಟಿಸಿಕೊಂಡರು. 2013ರಲ್ಲಿ ಸೋಮಣ್ಣ ಸೋಲುಂಡರು.
2018ರಲ್ಲಿ ಮತ್ತೆ ಗೋವಿಂದರಾಜನಗರ ಕ್ಷೇತ್ರದಿಂದ ಗೆದ್ದು ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದರು. 2023ರಲ್ಲಿ ಚಾಮರಾಜನಗರ, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕಡೆ ಸ್ಪರ್ಧಿಸಿ ಸೋತು ಶರಣಾಗಿದ್ದ ಸೋಮಣ್ಣಗೆ 2024ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಜನತೆ ರಾಜಕೀಯ ಪುರ್ನಜನ್ಮ ಕೊಟ್ಟಿದ್ದಾರೆ. ಇದೀಗ ಕೇಂದ್ರ ಮಂತ್ರಿ ಸ್ಥಾನದ ಯೋಗವು ಕೂಡಿಬಂದಿದೆ. ಲಿಂಗಾಯತ ಕೋಟಾದಡಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ.