ತುಮಕೂರು: ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರ ಭೇಟಿ ನೀಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಭೇಟಿ ನೀಡಿ, ಅಧಿಕಾರಿಗಳು, ಸಿಬ್ಬಂದಿಗೆ ಬಾಲನ್ಯಾಯ ಕಾಯ್ದೆ, ಪೋಕ್ಸೋ ಕಾಯ್ದೆ ಅನುಷ್ಠಾನದ ಬಗ್ಗೆ ಪಾಠ ಮಾಡಿದರು.
ಬಾಲ ನ್ಯಾಯ ಕಾಯ್ದೆಯ ಅನುಸಾರ ಪ್ರತೀ ಪೊಲೀಸ್ ಠಾಣೆಯಲ್ಲೂ ಮಕ್ಕಳ ವಿಶೇಷ ಪೊಲೀಸ್ ಘಟಕ ರಚಿಸಿ ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು, ಮಕ್ಕಳ ಪ್ರಕರಣಗಳ ದಾಖಲೆಯನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕು, ಮಕ್ಕಳಿಗೆ ಪೊಲೀಸ್ ಇಲಾಖೆ ಪರಿಚಯಿಸಲು ಹಾಗೂ ಮಕ್ಕಳ ಹಕ್ಕುಗಳನ್ನು ತಿಳಿಸಿಕೊಡಲು ತೆರೆದ ಮನೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಸೂಚಿಸಿದರು.
ಎಲ್ಲಾ ಗ್ರಾಪಂನಲ್ಲಿಯೂ ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚನೆಯಾಗಿದ್ದು ಅದರಲ್ಲಿ ಸದರಿ ಪಂಚಾಯ್ತಿ ವ್ಯಾಪ್ತಿಯ ಬೀಟ್ ಪೊಲೀಸ್ ಕೂಡ ಕೂಡ ಒಬ್ಬ ಸದಸ್ಯರಾಗಿದ್ದು ಸದರಿ ಸಮಿತಿಯ ಸಭೆಗೆ ಭಾಗವಹಿಸಬೇಕು, ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಮಕ್ಕಳಿಗೆ ರಕ್ಷಣೆ ಒದಗಿಸುವ ಮಹತ್ತರ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ ಎಂದರು.
ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದ್ದು ಇದರ ಪರಿಣಾಮಕಾರಿ ತಡೆಗಟ್ಟುವಿಕೆಯಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಅರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇನ್ನಿತರೇ ಇಲಾಖೆಗಳು ಸಮನ್ವಯದಿಂದ ಕೆಲಸಮಾಡಬೇಕು ಎಂದರು.
ಸದರಿ ಸಭೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ನವೀನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನುಷಾ ಮತ್ತಿತರರು ಇದ್ದರು.