ಜಿಲ್ಲೆ

ರೈತ ನಾಯಕ ಪುಟ್ಟಣ್ಣಯ್ಯ ಹೆಸರಿನಲ್ಲಿ ರೈತ ಭವನ; ರೈತ ಸಂಘದ ಕಾರ್ಯಕ್ಕೆ ಶಾಸಕ ದರ್ಶನ್ ಶ್ಲಾಘನೆ

ತುಮಕೂರು: ಮಾಜಿ ಶಾಸಕರೂ ಆದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ಥಳಿಯನ್ನು ತಾಲೂಕಿನ ಹೆಬ್ಬೂರು ರೈತ ಭವನದಲ್ಲಿ ಭಾನುವಾರ ಅನಾವರಣಗೊಳಿಸಲಾಯಿತು.

ಪಾಂಡವರಪರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭವನ ಹಾಗೂ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ, ರೈತ ನಾಯಕರ ಹೆಸರನ್ನು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸಾರ್ಥಕದ ಕೆಲಸ ಮಾಡಿದೆ ಎಂದರು.

ಕೆ.ಎಸ್.ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ,ಅವರ ಪುತ್ಥಳಿ ಆನಾವರಣ ಮಾಡಿ, ಹೊಸ ಪದ್ದತಿಗೆ ನಾಂದಿ ಹಾಡಲಾಗಿದ್ದು ಈ ಮೂಲಕ ರೈತ ಚಳವಳಿ ಜೀವಂತವಾಗಿರಲಿ, ಸರ್ಕಾರಗಳ ಕಣ್ತೆರೆಸುವ ಕೆಲಸವಾಗಲಿ ಎಂದರು.

ರೈತ ಸಂಘವೇ ತನ್ನ ಸ್ವಂತ ಅನುದಾನದಲ್ಲಿ ಒಂದು ಭವನ ನಿರ್ಮಾಣ ಮಾಡುವ ಮೂಲಕ ಇಡೀ ರೈತ ಸಂಘಕ್ಕೆ ಒಂದು ನೆಲೆ ಕಲ್ಪಿಸಿದೆ. ಇದು ಮಾದರಿ ಕೆಲಸವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಈ ರೀತಿಯ ಭವನ ನಿರ್ಮಾಣ ಮಾಡಬೇಕಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ, ರೈತ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಕನಸು ಇದಾಗಿತ್ತು. ಪ್ರತಿ ಜಿಲ್ಲೆಯಲ್ಲಿಯೂ ಒಂದೊAದು ಭವನ ನಿರ್ಮಾಣ ಮಾಡಬೇಕೆಂಬ ಮಹಾದಾಸೆ ಹೊಂದಿದ್ದರು ಎಂದು ಸ್ಮರಿಸಿದರು.

ಎರಡನೇ ಬಾರಿಗೆ ದೆಹಲಿಯಲ್ಲಿ ಲಕ್ಷಾಂತರ ರೈತರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ ಆದರೆ, ಅವರು ದೆಹಲಿಯ ಒಳ ಪ್ರವೇಶಿಸಿದಂತೆ ತಂತಿ ಬೇಲಿ, ಸಿಮೆಂಟ್ ಗೋಡೆಗಳನ್ನು ನಿರ್ಮಿಸಿ ತಡೆಯುವ ಪ್ರಯತ್ನ ನಡೆಸಿದೆ. ಇದು ನಿಜಕ್ಕೂ ಸರ್ವಾಧಿಕಾರಿ ಧೋರಣೆ ಎಂದು ಆಕೋಶ ಹೊರಹಾಕಿದರು.

ದೆಹಲಿಯಲ್ಲಿ ರೈತರ ಮೇಲಿನ ಹಲ್ಲೆಯನ್ನು ಖಂಡಿಸಿ ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯಲಿವೆ. ಹಾಗೆಯೇ ರಾಜ್ಯದಲ್ಲಿ ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ತುಮಕೂರು ಆದಿ ಚುಂಚನಗಿರಿಯ ಶಾಖಾ ಮಠದ ಶ್ರೀಮಂಗಳನಾಥಸ್ವಾಮೀಜಿ ಮಾತನಾಡಿ, ವಿಧಾನಸಭೆಯಲ್ಲಿ ರೈತರ ಬಗ್ಗೆ ಅತ್ಯಂತ ನಿಖರವಾಗಿ ಅಂಕಿ,ಆAಶಗಳ ಮೂಲಕ ಮಾತನಾಡುತ್ತಿದ್ದ ವ್ಯಕ್ತಿ ಕೆ.ಎಸ್.ಪುಟ್ಟಣ್ಣಯ್ಯ ಎಂದು ಸ್ಮರಿಸಿದರು.

ಅವರ ಪುತ್ರರಾದ ದರ್ಶನ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ, ರೈತ ಸಂಘ ತುಮಕೂರು ಜಿಲ್ಲಾ ಘಟಕ ಅವರ ಹೆಸರಿನಲ್ಲಿ ಭವನವೊಂದನ್ನು ನಿರ್ಮಿಸಿ, ಮುಂದಿನ ಪೀಳಿಗೆಗೆ ಪುಟ್ಟಣ್ಣಯ್ಯ ಅವರ ಹೆಸರನ್ನು ಹಸಿರಾಗಿಸಿದೆ. ಇದೊಂದು ಒಲ್ಳೆಯ ಕೆಲಸ. ಇಂತಹ ಕೆಲಸಗಳು ಮುಂದೆಯೂ ನಡೆಯಲಿ ಎಂದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಎಚ್.ನಿಂಗಪ್ಪ,
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಅರೆ ಶಂಕರ ಮಠದ ಶ್ರೀಸಿದ್ದರಾಮಚೈತನ್ಯ ಸ್ವಾಮೀಜಿ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಮಹೇಶ್ ಪ್ರಭು, ರಾಜ್ಯ ಕಾರ್ಯದರ್ಶಿ ಗೋಪಾಲ್, ಜಿ.ಸಿ.ಶಂಕರಪ್ಪ, ರವೀಶ್ ಇದ್ದರು.