ಜಿಲ್ಲೆ

ಮುದ್ದಹನುಮೇಗೌಡ ನಮ್ಮ ಅಭ್ಯರ್ಥಿ ಎಂದ ಕೆ.ಎನ್.ರಾಜಣ್ಣ

ತುಮಕೂರು: ಎಸ್.ಪಿ.ಮುದ್ದಹನುಮೇಗೌಡ ಶೀಘ್ರದಲ್ಲಿಯೇ ಕಾಂಗ್ರೆಸ್‌ಗೆ ವಾಪಸಾಗಲಿದ್ದು ಶೇ.99ರಷ್ಟು ಅವರಿಗೆ ಟಿಕೆಟ್ ಕೂಡ ಸಿಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಹಿರಂಗವಾಗಿಯೇ ಘೋಷಿಸಿದರು.

ಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ಗೋದಾಮು ಉದ್ಘಾಟನೆ ಸಮಾರಂಭದ ವೇದಿಕೆಯಲ್ಲಿ ಉಭಯ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್‌ಬಾಬು ಕೂಡ ಇದ್ದರು.

ಬಿಜೆಪಿಗೆ ಗುಡ್‌ಬೈ ಹೇಳಿ ಮಾತೃ ಪಕ್ಷ ಕಾಂಗ್ರೆಸ್ ಹೊಸ್ತಿಲಲ್ಲಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಲೋಕಸಭೆ ಚುನಾವಣೆಗೆ ಕಾರ್ಯಕರ್ತರಿಗೆ ಸಂದೇಶ ರವಾನಿಸಿದರು.

ಆರಂಭದಲ್ಲಿ ಮಾತನಾಡಿದ ಎಸ್‌ಪಿಎಂ ಭಾಷಣ ಉಲ್ಲೇಖಿಸಿ ಮಾತನಾಡಿದ ರಾಜಣ್ಣ, ಎಸ್‌ಪಿಎಂ ಭಾಷಣದ ವೈಖರಿಯನ್ನು ನೋಡಿದರೆ ಚುನಾವಣೆಗೆ ಸಿದ್ಧರಾದಂತಿದೆ, ಕಾಂಗ್ರೆಸ್ ಅಭ್ಯರ್ಥಿಯಾಗಿಯೂ ಕಣಕ್ಕಿಳಿಯುತ್ತಾರೆ, ಎಲ್ಲರೂ ಅವರ ಪರವಾಗಿರಬೇಕು ಎಂದು ಹೇಳಿದರು.