ತುಮಕೂರು: ಒಕ್ಕಲಿಗ ಸಮುದಾಯದ ಮುಖಂಡರು ಒಟ್ಟಾಗಿದ್ದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಎಚ್.ಡಿ.ದೇವೇಗೌಡರು ಸೋಲುತ್ತಿರಲಿಲ್ಲ, ನಾವೆಲ್ಲಾ ತಪ್ಪು ಮಾಡಿದ್ದೇವೆ ಎಂದು ಎಂದು ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಕೆಂಪೇಗೌಡರ ಜಯಂತಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ಪ್ರಭಲವಾಗಿದ್ದು, ರಾಜಕೀಯ ಅಧಿಕಾರಗಳು ಕೈತಪ್ಪುತ್ತಿವೆ ಎಲ್ಲರೂ ಜಾಗೃತರಾಗಬೇಕಿದೆ ಎಂದರು.
ಕಳೆದ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಶಕ್ತಿ ಹಾಗೂ ನಾಯಕತ್ವ ಗುಣದಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸಿದರೂ ಸಿಎಂ ಆಗಲು ಸಾಧ್ಯವಾಗಿಲ್ಲ, ಅವರನ್ನು ಸಿಎಂ ಮಾಡಲು ಸಮುದಾಯದ ಶಾಸಕರು ಧ್ವನಿ ಎತ್ತಲಿಲ್ಲ ಎಂದರು.
ತುಮಕೂರು ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ, ಮುಂದಿನ ದಿನಗಳಲ್ಲಿಯೂ ಅಂತಹ ಸನ್ನಿವೇಶ ಎದುರಾದರೆ ನಮ್ಮ ಸಮುದಾಯದ ಶ್ರೀಗಳೂ ಸಹ ಧ್ವನಿ ಎತ್ತಬೇಕು ಎಂದು ವೇದಿಕೆಯಲ್ಲಿದ್ದು ಆದಿ ಚುಂಚನಗಿರಿ ಶ್ರೀಗಳಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ವೈ.ಕೆ.ರಾಮಯ್ಯ, ಕೆ.ಲಕ್ಕಪ್ಪ, ಹುಚ್ಚಮಾಸ್ತಿಗೌಡ, ಮುದ್ದಹನುಮೇಗೌಡ ಸೇರಿದಂತೆ ಸಾಕಷ್ಟು ಮುಖಂಡರು ಸಮುದಾಯಕ್ಕಾಗಿ ದುಡಿದಿದ್ದಾರೆ ಎಂದು ಸ್ಮರಿಸಿದರು.