ತುಮಕೂರು: ಕಳೆದ ವರ್ಷದ ಜೂನ್‌ನಿಂದಲೂ ರಾಜ್ಯದಲ್ಲಿ ರೈತರಿಗೆ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಸ್ಫೋಟಗೊಳ್ಳಲಿದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹರಿಹಾಯ್ದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರಿಗೆ ರಾಜ್ಯದಲ್ಲಿ 714ಕೋಟಿ ಹಾಲಿನ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ, ಬಡವರ ಹೊಟ್ಟೆ ಮೇಲೆ ಹೊಡೆದು ಯಾರಿಗೊ ಪುಕ್ಸಟ್ಟೆ ಯೋಜನೆ ಕೊಟ್ಟರೆ ಸಹಿಸೊಕೆ ಹಾಗೊಲ್ಲ ಎಂದರು.
ಕೂಡಲೇ ರೈತರ ಪ್ರೋತ್ಸಾಹಧನ ನೀಡಬೇಕು, ಸಹಕಾರ ಸಂಘಗಳಿಗೆ ಶೀಘ್ರ ಚುನಾವಣೆ ನಡೆಸಬೇಕು ಇದೆಲ್ಲವನ್ನೂ ಸಾರ್ವಜನಿಕ ಚರ್ಚೆಗೆ ತರಬೇಕು, ಬಿಜೆಪಿ ಮುಖಂಡರು ಸದನದಲ್ಲಿಯೂ ಇದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಕೂಡ ರೈತರೊಂದಿಗೆ ಬೆಳೆದವರು, ಅವರಿಗೂ ಕಷ್ಟ ಆರ್ಥವಾಗುತ್ತಿಲ್ಲ ಎಂಬುದು ನಮ್ಮ ಬೇಸರವಾಗಿದೆ. ಹಾಲು ಉತ್ಪಾದಕರರ ಸಂಘಗಳಿಗೆ ಚುನಾವಣೆ ನಡೆಸದೇ ಅಧಿಕಾರಿಗಳ ಕೈಗೆ ಡೇರಿ ಆಡಳಿತ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಕಾರ್ಯಕ್ರಮಗಳಿಗೆ ನೀಡುವ ಆದ್ಯತೆಯನ್ನು ದುಡಿಯುವವರಿಗೂ ನೀಡಬೇಕು, ವಿಪಕ್ಷವಾಗಿಯೂ ಸದನದಲ್ಲಿ ನಮ್ಮ ಹೋರಾಟ ಸಾಲದು, ವಿಪಕ್ಷ ನಾಯಕರಿಗೆ ಮಾಹಿತಿ ಕೊರತೆಯಿರಬೇಕು, ಕಾರ್ಯಕರ್ತರು ಮಾಹಿತಿ ಕೊಡಬೇಕು ಎಂದರು.