ಜಿಲ್ಲೆ

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

ತುಮಕೂರು:ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಸ್ಲಿಂ, ಕ್ರಿಶ್ಚಿಯನ್​, ಜೈನ್​, ಸಿಖ್​, ಬೌದ್ಧ ಹಾಗೂ ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ 25000ರೂ. ವಿಶೇಷ ಪ್ರೋತ್ಸಾಹಧನ ನೀಡಲು ಅರ್ಹರಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಜನವರಿ 6ರ ವರೆಗೆ ವಿಸ್ತರಿಸಲಾಗಿದೆ.

ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಹಾಗೂ ಕಲಿಕಾ ಮತ್ತು ಸಾಮಗ್ರಿಗಳನ್ನು ಖರೀದಿಸಲು ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ನ್ಯಾಷನಲ್​ ಕೌನ್ಸಿಲ್​ ಆಫ್​ ಟೀಚರ್​ ಎಜುಕೇಷನ್​ನಿಂದ ಮಾನ್ಯತೆ ಪಡೆದಿರುವ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್​ ಕೋರ್ಸ್​ಗೆ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ವರ್ಷದ ಅಂಕಪಟ್ಟಿ, ಶುಲ್ಕ ಪಾವತಿದ ರಸೀದಿ, ಬ್ಯಾಂಕ್​ ಖಾತೆಯ ನಕಲು ಪ್ರತಿ, ಆಧಾರ್​ ಕಾರ್ಡ್​ ನಕಲು ಪ್ರತಿ, ಪಾಸ್​ಪೋರ್ಟ್​ ಅಳತೆಯ 2 ಭಾವಚಿತ್ರವನ್ನು ಲಗತ್ತಿಸಿ ಜನವರಿ 6ರೊಳಗಾಗಿ ಸಲ್ಲಿಸಬಹುದು.

ಅರ್ಜಿಯ ಪ್ರತಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ ದೂ.0816 -2273724 ಸಂಪರ್ಕಿಸಿ.