ಜಿಲ್ಲೆ

ತುಮಕೂರಿನಲ್ಲಿ ಬೃಹತ್​ ಉದ್ಯೋಗ ಮೇಳ

ತುಮಕೂರು: ನಗರದ ತುಮಕೂರು ವಿವಿ ಡಾ.ಪಿ.ಸದಾನಂದಮಯ್ಯ ಬ್ಲಾಕ್​ನಲ್ಲಿ ನ.14ರಂದು ಬೃಹತ್​ ಉದ್ಯೋಗ ಮೇಳ ಆಯೋಜಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೃಹತ್​ ಉದ್ಯೋಗ ಮೇಳದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಮೇಳದಲ್ಲಿ 18 ರಿಂದ 35 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ಆಧಾರ್​ ಕಾರ್ಡ್​ ಮತ್ತು ಸ್ವಯಂ ವಿವರ(ರೆಸ್ಯೂಮ್​)ಗಳುಳ್ಳ ಕನಿಷ್ಟ 10 ಪ್ರತಿಗಳೊಂದಿಗೆ ಹಾಜರಾಗುವ ಕುರಿತು ಪ್ರಚಾರಪಡಿಸಬೇಕು ಎಂದರು.

ಎಸ್​ಎಸ್​ಎಲ್​ಸಿ, ಪಿಯು, ಪದವಿ, ಸ್ನಾತಕೋತ್ತರ ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಆನ್​ಲೈನ್​ ಮೂಲಕ 640ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಲು ಅಧಿಕಾರಿಗಳು ಪ್ರಚಾರ ಹೆಚ್ಚಿಸಬೇಕು ಎಂದರು.

ಮೇಳದಂದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್​ ವ್ಯವಸ್ಥೆ ಕಲ್ಪಿಸಲು ಹಾಗೂ ಮೇಳದ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಪ್ರಚಾರ ನೀಡಬೇಕು ಎಂದು ಸೂಚಿಸಿದರು.

ಗ್ರಾಮೀಣ ಜನತೆಗೆ ಮಾಹಿತಿ ತಲುಪಿಸುವ ದೃಷ್ಟಿಯಿಂದ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ 330 ಗ್ರಾಪಂ ವ್ಯಾಪ್ತಿಯ ಕಸದ ವಾಹನಗಳಲ್ಲಿ ಉದ್ಯೋಗ ಮೇಳದ ಧ್ವನಿ ಮುದ್ರಿಕೆಗಳನ್ನು ಪ್ರಸಾರ ಮಾಡಲು ಸೂಚಿಸಿದರು. ಜತೆಗೆ ಸಾರ್ವಜನಿಕ ಬಸ್​ಗಳಲ್ಲಿ ಉದ್ಯೋಗ ಮೇಳ ಪೋಸ್ಟರ್​ಗಳನ್ನು ಅಳವಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮೇಳದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿ, ಕೈಗಾರಿಕಾ ಘಟಕ ಮತ್ತು ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿದ್ದು, ಇಂಜಿನಿಯರಿಂಗ್​, ಡಿಪ್ಲೋಮಾ, ಐಟಿಐ, ಪದವಿ ಹಾಗೂ ಪಿಯುಸಿ ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಕಿಶೋರ್​, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಟಿ.ಕೆ.ಕೆಂಪಯ್ಯ ಮತ್ತಿತರರು ಇದ್ದರು.