ಜಿಲ್ಲೆ

ಬಿಜೆಪಿ ಸರ್ಕಾರದ ಕರೊನಾ ಅವ್ಯವಹಾರದ ಬಗ್ಗೆ ತನಿಖೆ ನಡೆಸುತ್ತೇವೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ತುಮಕೂರು: ಕರೊನಾ ನೆಪಮಾಡಿಕೊಂಡು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರೊನಾ ಸಂದರ್ಬದಲ್ಲಿ ನಡೆದ ಎಲ್ಲ ಅವ್ಯವಹಾರಗಳನ್ನು ತನಿಖೆ ಮಾಡಿಸುತ್ತೇವೆ. ಇದು ದ್ವೇಷದ ರಾಜಕಾರಣ ಅಲ್ಲ, ತನಿಖೆ ಮಾಡಿಸುವ ಬಗ್ಗೆ ನಾವು ಚುನಾವಣೆಯಲ್ಲಿ ನೀಡಿದ್ದ ಭರವಸೆ ನೀಡಿದ್ದೇವೆ ಎಂದರು.

ಅವ್ಯವಹಾರದ ಬಗ್ಗೆ ಯಾವ ರೀತಿಯ ತನಿಖೆಯಾಗಬೇಕು ಅನ್ನೋದನ್ನು ಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಖರೀದಿ ಮಾಡಿದ ಔಷಧ, ಸಲಕರಣೆಗಳ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬೀಳಲಿದೆ ಎಂದರು.

ಅವ್ಯವಹಾರದ ಬಗ್ಗೆ ಸಾರ್ವಜನಿಕರ ಲೆಕ್ಕಪತ್ರ ಸಮಿತಿ ವರದಿ ನೀಡಿದ್ದು ಅವ್ಯವಹಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ಮಾಡುತ್ತೇವೆ ಎಂದರು.