ಹಂದನಕೆರೆ: ತುಮಕೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಹಂದನಕೆರೆ ಹೋಬಳಿ ಕೇಂದ್ರದಿಂದ ಜಿಲ್ಲಾ ಕೇಂದ್ರ ತುಮಕೂರಿಗೆ ಸಂಚರಿಸಲು ಬೆಳಗ್ಗೆ 7.30ರ ನಂತರ ಬಸ್ ಸೌಕರ್ಯವಿಲ್ಲದೆ ಈ ಭಾಗದ ಜನರು ಪರದಾಡುವಂತಾಗಿದೆ.
ನೆರೆಯ ಹಾಸನ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಹಂದನಕೆರೆ ತುಮಕೂರಿನಿಂದ ಬರೋಬ್ಬರಿ 110ಕಿಮೀ ದೂರದಲ್ಲಿದ್ದು ಈ ಭಾಗದಲ್ಲಿ ಬಸ್ ಸೌಲಭ್ಯ ನೀಡುವಂತೆ ಕೆಎಸ್ಆರ್ಟಿಸಿ ವಿಭಾಗಾಧಿಕಾರಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಪನ್ಮೂಲ ಕ್ರೂಢಿಕರಣದ ನಂತರ ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂಬ ಉತ್ತರ ಕೇಳಿ ಸಾಕಾಗಿದೆ ಎನ್ನುತ್ತಾರೆ ಸ್ಥಳಿಯರು.
ಹಂದನಕೆರೆ ಹೋಬಳಿ ಸೆಬ್ಬೇನಹಳ್ಳಿ ಮಾರ್ಗವಾಗಿ ಬೆಳಗ್ಗೆ 7ಕ್ಕೆ ಬರುವ ಬಸ್ ಬಿಟ್ಟರೆ ಇನ್ನು ದಿನಪೂರ್ತಿ ಈ ಭಾಗದಿಂದ ಜಿಲ್ಲಾ ಕೇಂದ್ರಕ್ಕೆ ನೇರವಾಗಿ ಬಸ್ ಸೌಲಭ್ಯವಿಲ್ಲ. ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ, ತಿಪಟೂರು ಅಥವಾ ಹುಳಿಯಾರು ತಲುಪಿ ಅಲ್ಲಿಂದ ಬೇರೊಂದು ಬಸ್ನಲ್ಲಿ ಪ್ರಯಾಣಿಸುವ ಸ್ಥಿತಿಯಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಿಂದ ಬೆಂಗಳೂರಿಗೆ ಪ್ರತಿದಿನ ನೂರಾರು ಬಸ್ಗಳು ಬೆಂಗಳೂರಿಗೆ ತೆರಳುತ್ತವೆ, ಈ ಬಸ್ಗಳ ಪೈಕಿ ಮೂರು, ನಾಲ್ಕು ಬಸ್ಗಳನ್ನಾದರೂ ಗವಿರಂಗಾಪುರಬೆಟ್ಟ ಮಾರ್ಗವಾಗಿ ಹಂದನಕೆರೆ, ಮತಿಟ್ಟ ಮೂಲಕ ಚಿಕ್ಕನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಯಕ್ಷಪ್ರಶ್ನೆ ಎನ್ನಿಸಿದೆ.
ಮಧ್ಯಾಹ್ನ 3.30ಕ್ಕೆ ಚಿ.ನಾ.ಹಳ್ಳಿಗೆ ಬರುವ ತುಮಕೂರು 1ನೇ ಟಕ ಓಡಿಸುತ್ತಿರುವ ಬೆಂಗಳೂರು&ಹೊಸದುರ್ಗ ಬಸ್, ಮಧ್ಯಾಹ್ನ 2.15ಕ್ಕೆ ಬರುವ ಬೆಂಗಳೂರು&ಹೊಸದುರ್ಗ&ಉಕ್ಕಡಗಾತ್ರಿ ಬಸ್ ಹಾಗೂ ಕುಣಿಗಲ್ ಡಿಪೋ ಓಡಿಸುತ್ತಿರುವ ಬಸ್ಗಳನ್ನು ಹುಳಿಯಾರು ಮಾರ್ಗದ ಬದಲಾಗಿ ಹಂದನಕೆರೆ&ಗವಿರಂಗನಾಥಪುರ ಕ್ಷೇತ್ರದ ಮಾರ್ಗವಾಗಿ ಓಡಿಸಿದರೆ ಅನುಕೂಲವಾಗಲಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಪುಟ್ಟಯ್ಯಸ್ಥಳಿಯರು, ಹಂದನಕೆರೆ