ಚಿಕ್ಕನಾಯಕನಹಳ್ಳಿ: ಗ್ರಾಮಗಳಲ್ಲಿ ದೇವಾಲಯಗಳನ್ನು ರಕ್ಷಿಸಿ ಶ್ರದ್ಧಾ ಭಾವನೆಯಿಂದ ಧಾರ್ಮಿಕ ಪೂಜಾಕಾರ್ಯ ನಡೆಸಿದಲ್ಲಿ ಗ್ರಾಮಗಳ ಏಳಿಗೆ, ಸಮುದಾಯದಲ್ಲಿ ಒಗ್ಗಟ್ಟು ನಿಮಾರ್ಣವಾಗಿ ಗ್ರಾಮಗಳು ಸುಭಿಕ್ಷವಾಗಿರುತ್ತವೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಶ್ರೀಗುರು ಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಶೆಟ್ಟಿಕೆರೆ ಹೋಬಳಿ ಹಾಲುಗೊಣದಲ್ಲಿ ಶುಕ್ರವಾರ ಶ್ರೀಗುರು ಮಹಲೀಂಗೇಶ್ವರ ಸ್ವಾಮಿಯ ನೂತನ ದೇವಾಲಯ ಪ್ರವೇಶ, ಶಿಖರ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮನುಷ್ಯನ ಸ್ವಾರ್ಥದ ಬದುಕು ತೊಂದರೆಗೀಡು ಮಾಡುತ್ತದೆ. ಬದುಕಿನ ಜಂಜಾಟದ ನಡುವೆ ಶಾಂತಿ, ನೆಮ್ಮದಿ ಇಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದ್ದು ನೆಮ್ಮದಿಯಿಂದರಬೇಕಾರೆ ಧರ್ಮದ ಮೂಲಕ ಮಾತ್ರ ಸಾಧ್ಯ. ಧರ್ಮ ಮಾರ್ಗದಲ್ಲಿ ನಡೆಯುವ ಪ್ರತಿ ಮನುಷ್ಯನಿಗೂ ಒಳ್ಳೆಯ ಫಲದೊರತೆ ದೊರೆಯುತ್ತದೆ ಎಂದರು.
ಪ್ರಸ್ತುತ ಸಮಾಜದಲ್ಲಿ ನಮ್ಮ ಸಂಸ್ಕತಿಯನ್ನು ವಿಕೃತಗೊಳಿಸುತ್ತಿರುವುದು ನೆನೆದರೆ ನೋವುಂಟಾಗುತ್ತದೆ. ಹೊಂದಾಣಿಕೆಯ ಮನೋಭಾವ, ಸಮಾನತೆ, ಸಹಬಾಳ್ವೆ, ಗೌರವ, ನಂಬಿಕೆ ಯಾರಲ್ಲಿಯೂ ಇಲ್ಲದಂತಾಗಿ ಮಕ್ಕಳಿಗೆ ತಂದೆ ತಾಯಿಯ ಮೇಲೆ ಗೌರವಾಧರಗಳೇ ಇಲ್ಲದಂತಾಗಿದೆ. ಅದಕ್ಕಾಗಿ ಪೋಷಕರು ಕುಟುಂಬದಲ್ಲಿ ಬೆರೆತು ಮಕ್ಕಳಲ್ಲಿ ಉತ್ತಮ ಸಂಸತಿ, ಸಹಬಾಳ್ವೆ, ಪ್ರೀತಿ, ವಿಶ್ವಾಸಗಳನ್ನು ಬೆಳೆಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಬೇಕಿದೆ ಎಂದರು.
ಮನುಷ್ಯ ಸ್ವಾರ್ಥ ಜೀವನಕ್ಕಾಗಿ ಪ್ರಕೃತಿಯನ್ನೆ ಹಾಳುಮಾಡುತ್ತಿದ್ದು, ಸ್ವಾರ್ಥದ ಫಲವಾಗಿ ಇಂದು ಪ್ರಕೃತಿ ಮುನಿದು ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆಯಾಗುತ್ತಿಲ್ಲ. ಅತಿವೃಷ್ಠಿ-ಅನಾವೃಷ್ಠಿ ನಾಡಿನಾದ್ಯಂತ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮನುಷ್ಯ ಸ್ವಾರ್ಥಪರ ಚಿಂತನೆ ಬಿಟ್ಟು ಪ್ರಕೃತಿಯಲ್ಲಿ ದೇವರನ್ನು ಕಾಣುವ ಮೂಲಕ ಉತ್ತಮ ಬದುಕನ್ನು ಕಂಡುಕೊಳ್ಳಬೇಕು ಎಂದರು.
ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ಕಳಶ ಪ್ರತಿಫಿ್ಠಾಪಿಸಿ ಮಾತನಾಡಿ, ತಲೆಮಾರುಗಳಿಂದ ತಲೆಮಾರುಗಳಿಗೆ ದೇವಾಲಯಗಳ ಪುನರುಜ್ಜೀವನ ಕಾರ್ಯ ನಡೆಯಬೇಕಿದೆ. ಮಾನವನು ತನ್ನಲ್ಲಿರುವಂತಹ ಧಾರ್ಮಿಕ ಚಿಂತನೆಗಳನ್ನು ಜಾಗೃತಗೊಳಿಸುವಂತಹ ಕಾರ್ಯವನ್ನು ಮಾಡಿದಾಗ ಸುಖಿ ಸಮಾಜದ ಕಲ್ಪನೆ ಕಾಣಬಹುದಾಗಿದೆ ಎಂದರು.
ಗೋಡೆಕೆರೆ ಸಂಸ್ಥಾನ ಮಠದ ಚರಪಟ್ಟಾಧ್ಯಕ್ಷ ಶ್ರೀ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ ಅವರಿಂದ ಪ್ರಾಣ ಪ್ರತಿಷ್ಟಾಪನೆ ಹಾಗೂ ವಟುಗಳಿಗೆ ದೀಕ್ಷೆ ನೀಡಲಾಯಿತು.