ಜಿಲ್ಲೆ

ಗೂಳೂರು ಗಣೇಶನ ವಿಸರ್ಜನಾ ಮಹೋತ್ಸವ

ತುಮಕೂರು: ಇತಿಹಾಸ ಪ್ರಸಿದ್ದ ಗೂಳೂರು ಗಣೇಶನ ವಿಸರ್ಜನಾ ಮಹೋತ್ಸವ ಡಿ.7 ಹಾಗೂ 8ರಂದು ವಿಜೃಂಭಣೆಯಿಂದ ನಡೆಯಲಿದೆ.

ಬಲಿಪಾಢ್ಯಮಿಯ ದಿನ ಸ್ಥಾಪಿಸಲಾಗುವ ಗಣೇಶಮೂರ್ತಿಗೆ ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೃಹತ್​ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಲಾಗಿದೆ.

ಶನಿವಾರ ರಾತ್ರಿ ವಿದ್ಯುತ್​ ಅಲಂಕಾರ ಮತ್ತು ಹೂವಿನಿಂದ ಅಲಂಕೃತಗೊಂಡ ಮಂಟಪದಲ್ಲಿ ಗಣಪತಿ ಪ್ರತಿಷ್ಠಾಪಿಸಿ ಶ್ರೀಮಹಾಗಣಪತಿ ಉತ್ಸವವನ್ನು ನಾದಸ್ವರ, ಕರಡಿಮಜಲು, ನಾಸಿಕ್​ ಡೋಲ್​, ಕೇರಳದ ಜಾನಪದ ನೃತ್ಯ,ಮಂಡದ ಕಲಾ ತಂಡದಿಂದ ಕರಡಿ ವಾಧ್ಯ, ನಾಸಿಕ್​ ಡೋಲ್​,ಮಹಿಳಾ,ಪುರುಷ ವೀರಗಾಸೆ ತಂಡಗಳು, ಕೀಲಕುದುರೆ, ನಂದಿಕೋಲು,ನವಿಲು,ಜಿರಾಫೆ, ಕವಾಡ ನೃತ್ಯ, ಹಾಸ್ಯದ ಚಾರ್ಲಿ ನೃತ್ಯ, ವೀರಭದ್ರ ದೇವರ ಕುಣಿತ,ವೀರಗಾಸೆ, ಡೊಳ್ಳು, ಪೂಜಾ ಕುಣಿತದ ಪ್ರದರ್ಶನದೊಂದಿಗೆ ಗೂಳೂರಿನ ಪ್ರಮುಖ ರಾಜಬೀದಿಗಳಲ್ಲಿ ಗಣಪತಿಯ ಉತ್ಸವ ನಡೆಯಲಿದೆ.

ವಿಶೇಷ ಆಕರ್ಷಣೆಯಾಗಿ ಗೂಳೂರಿನ ಪಾರ್ಥಸಾರಥಿ ಅವರಿಂದ ಚಿತ್ರದುರ್ಗದ ಮದಕರಿ ನಾಯಕನ ವೇಷ ಹಾಗು ಕುಮಟನಾಯಕ ಅವರ ಕುಟುಂಬದಿಂದ ಪಾಳೇಗಾರರ ವೇಷದ ಪ್ರದರ್ಶನ ನಡೆಲಿದೆ.

ಭಾನುವಾರ ಮಧ್ಯಾಹ್ನದಿಂದ ಗ್ರಾಮದ ಮಧ್ಯಭಾಗದಿಂದ ಶ್ರೀಮಹಾಗಣಪತಿಯ ಉತ್ಸವ ಆರಂಭಗೊಂಡು ಸಂಜೆ ಐದು ಗಂಟೆಯವರಗೆ ಗ್ರಾಮದಲ್ಲಿ ಮರೆವಣಿಗೆ ನಡಸಿ,ಸಕಲ ಧಾರ್ಮಿಕ ವಿಧಿ, ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಗುತ್ತಿದೆ.

ವಿಸರ್ಜನೆ ವೇಳೆ ನುರಿತ ಸಿಡಿಮದ್ದು ಸಿಡಿಸುವ ಕೆಲಸಗಾರರಿಂದ 500 ಅಡಿ ಉದ್ದದ ಜೋಗ್​ ಪಾಲ್ಸ್​,ನೂರು ಬಾರಿ ಒಡೆಯುವ ಔಟ್ಸ್​ ಹಾಗೂ ಪ್ಯಾರಚೂಟ್​ ಗಳ ಪ್ರದರ್ಶನ ಏರ್ಪಡಿಸಲಾಗಿದೆ.ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಒಂದು ತಿಂಗಳಕಾಲ ಪೂಜಿಸಲಾದ ಗಣಪತಿಯ ವಿಸರ್ಜನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರಲ್ಲದೆ, ಹೊರರಾಜ್ಯದ ಭಕ್ತರು ಪಾಲ್ಗೊಳ್ಳುವುದು ವಾಡಿಕೆ.

ಸೋಮವಾರ ಶ್ರೀಮಹಾಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಬೆಳಗ್ಗೆ 11ಕ್ಕೆ ಶ್ರೀಮಹಾಗಣಪತಿ ಕೃಪಾಪೋಷಿತ ನಾಟಕಮಂಡಳಿವತಿಯಿಂದ ಕರುಕ್ಷೇತ್ರ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.