ಜಿಲ್ಲೆ

ಕ್ವಾರಿ ಲೀಸ್​ಗೆ ಅನುಮತಿ ನೀಡಿ: ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್​ ತಾಕೀತು

ತುಮಕೂರು: ಹೊಸ ಗಣಿ ನೀತಿಯನುಸಾರ ಗಣಿಗಾರಿಕೆ ಕ್ವಾರಿ ಹಾಗೂ ಕ್ರಷರ್​ ಟಕಗಳಿಗೆ ವಿಳಂಬ ಮಾಡದೆ ಕಂದಾಯ ಮತ್ತು ಅರಣ್ಯ ಇಲಾಖೆಗಳಿಂದ ನಿರಾೇಪಣಾ ಪತ್ರವನ್ನು ಪಡೆದು ಲೀಸ್​ಗೆ ಅನುಮತಿ ನೀಡಬೇಕೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ಆಚಾರ್​ ಹಾಲಪ್ಪ ಬಸಪ್ಪ ತಾಕೀತು ಮಾಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಸಂಜೆ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಲೀಸ್​ಗೆ ಪರವಾನಗಿ ನೀಡಿದಲ್ಲಿ ಜನರ ಬೇಡಿಕೆಗನುಗುಣವಾಗಿ ಎಂ&ಸ್ಯಾಂಡ್​ ಒದಗಿಸಬಹುದಲ್ಲದೆ ಸರ್ಕಾರಕ್ಕೂ ಸಹ ರಾಜಸ್ವ ಸಂಗ್ರಹಣೆ ಹೆಚ್ಚಾಗಲಿದೆ ಎಂದು ತಿಳಿಸಿದರು.

ಗಣಿಗಾರಿಕೆಯಿಂದ ಸಂಗ್ರಹವಾದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ಮೊತ್ತವನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಶೇ.100ರಷ್ಟು ವಿನಿಯೋಗಿಸಬೇಕು. ಪ್ರಸಕ್ತ ವರ್ಷ ಸರ್ಕಾರ 120 ಕೋಟಿ ರೂ.,ಗಳ ರಾಜಸ್ವ ಸಂಗ್ರಹಿಸಲು ಗುರಿ ನಿಗದಿಪಡಿಸಿದ್ದು, ಗುರಿಯನ್ನು ಸಾಧಿಸಬೇಕು ಎಂದು ನಿರ್ದೇಶಿಸಿದರು. ಜಿಲ್ಲೆಯಲ್ಲಿ ಸ್ಟೋನ್​ ಕ್ರಷರ್​ ಟಕ ಸ್ಥಾಪನೆಗಾಗಿ 199 ಅರ್ಜಿ ಸ್ವೀಕೃತವಾಗಿದ್ದು, ಈ ಪೈಕಿ 44 ಅರ್ಜಿಗಳಿಗೆ ಬಿ1 ಫಾರಂ ಹಾಗೂ 87 ಅರ್ಜಿಗಳಿಗೆ ಲೈಸೆನ್ಸ್​ (ಫಾರಂ ಸಿ) ವಿತರಿಸಲಾಗಿದೆ. ಉಳಿದಂತೆ 57 ಅರ್ಜಿಗಳನ್ನು ಫಾರಂ ಡಿ ಅಡಿ ತಿರಸ್ಕರಿಸಲಾಗಿದ್ದು, 11 ಅರ್ಜಿಗಳು ಬಾಕಿ ಉಳಿದಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್​ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ 2021&22 ಮತ್ತು 2022&23ನೇ ಸಾಲಿನಲ್ಲಿ 2022ರ ಜೂನ್​ ಅಂತ್ಯದವರೆಗೆ 4098.32 ಲಕ್ಷ ರೂ. ಸಂಗ್ರಹಿಸಲಾಗಿದ್ದು, ಈ ಹಣವನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ 630 ಕಾಮಗಾರಿ ಕೈಗೊಳ್ಳಲು 4995.63 ಲಕ್ಷ ರೂ.ಗಳ ಕ್ರಿಯಾಯೋಜನೆ ತಯಾರಿಸಲಾಗಿದೆ. ಇದರಲ್ಲಿ 140 ಕಾಮಗಾರಿಗಳು ಪೂರ್ಣಗೊಂಡಿದ್ದು, 15 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದಂತೆ 315 ಕಾಮಗಾರಿಗಳು ಪ್ರಾರಂಭವಾಗಬೇಕಾಗಿದ್ದು, 160 ಕಾಮಗಾರಿಗಳು ರದ್ದಾಗಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ಮಾಡುವ 19 ಪ್ರಕರಣ ಪತ್ತೆ ಹಚ್ಚಿ ಇದರಲ್ಲಿ 11 ಮೊಕದ್ದಮೆ ದಾಖಲಿಸಿ 2.97 ಲಕ್ಷ ರೂ.,ಗಳ ದಂಡ ವಸೂಲಿ ಮಾಡಲಾಗಿದೆ. ಅನಧಿಕೃತ ಖನಿಜ ಸಾಗಾಣಿಕೆಗೆ ಸಂಬಂಧಿಸಿದಂತೆ 83 ಪ್ರಕರಣ ಪತ್ತೆ ಹಚ್ಚಿ 38.78 ಲಕ್ಷ ರೂ. ದಂಡ ಹಾಗೂ ಅಕ್ರಮ ಖನಿಜ ದಾಸ್ತಾನು ಮಾಡಿದ 4 ಪ್ರಕರಣಗಳನ್ನು ಪತ್ತೆ ಹಚ್ಚಿ ಈ ಪೈಕಿ 3 ಮೊಕದ್ದಮೆ ದಾಖಲಿಸಿ 3.14 ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದರು.

ಎಂಎಸ್​ಎಂಇ ಗಣಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್​ ಕುಮಾರ್​ ಪಾಂಡೆ, ಜಿಲ್ಲಾಧಿಕಾರಿ ವೈ.ಎಸ್​ ಪಾಟೀಲ, ಜಿಪಂ ಸಿಇಒ ಡಾ. ಕೆ. ವಿದ್ಯಾಕುಮಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ರಮೇಶ್​ ಉಪವಿಭಾಗಾಧಿಕಾರಿಗಳಾದ ವಿ. ಅಜಯ್​, ಸೋಮಪ್ಪ ಕಡಕೋಳ, ಎಎಸ್ಪಿ ಟಿ.ಜೆ.ಉದೇಶ್​ ಮತ್ತಿತರರು ಉಪಸ್ಥಿತರಿದ್ದರು.

ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ 2554 ಕೋಟಿ. ರೂ.,
ಕೆಎಂಇಆರ್​ಸಿ ಅನುದಾನಕ್ಕೆ ಸಂಬಂಧಪಟ್ಟಂತೆ ತುಮಕೂರು ಜಿಲ್ಲೆಗೆ 2554.04 ಕೋಟಿ ರೂ.,ಗಳ ಅನುದಾನ ಮೀಸಲಿದ್ದು, ಈ ಅನುದಾನದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಒಟ್ಟು 48 ಗಣಿಭಾಧಿತ ಗ್ರಾಮಗಳ ಅಭಿವೃದ್ಧಿಗೆ 1202.24 ಕೋಟಿ ರೂ., ತಿಪಟೂರು ತಾಲೂಕಿನ ಒಟ್ಟು 13 ಗಣಿಭಾಧಿತ ಗ್ರಾಮಗಳ ಅಭಿವೃದ್ಧಿಗೆ 403.003 ಕೋಟಿ ರೂ., ಗುಬ್ಬಿ ತಾಲೂಕಿನ ಒಟ್ಟು 22 ಗಣಿಭಾಧಿತ ಗ್ರಾಮಗಳ ಅಭಿವೃದ್ಧಿಗೆ 534.998 ಕೋಟಿ ರೂ., ಉಳಿದ 413.804 ಕೋಟಿ ರೂ.ಗಳನ್ನು ಜಿಲ್ಲೆಯ ಇತರ ತಾಲೂಕುಗಳ ಗಣಿ ಭಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ ಎಂದು ಮಹೇಶ್​ ಸಭೆಗೆ ಮಾಹಿತಿ ನೀಡಿದರು.