ತುಮಕೂರು: ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ನ.3 ರಿಂದ ಡಿಸೆಂಬರ್ 2ರ ವರೆಗೆ 8ನೇ ಸುತ್ತಿನ ಕಾಲುಬಾಯಿ ಜ್ವರದ ವಿರುದ್ಧದ ಸಾಮೂಹಿಕ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿದ್ದು, ಪಶುಪಾಲನಾ ಇಲಾಖೆಯ 554 ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಉಚಿತವಾಗಿ ಲಸಿಕೆ ನೀಡಲಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಅಭಿಯಾನದಲ್ಲಿ ಪ್ರತಿಯೊಂದು ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಬೇಕು. ಲಸಿಕಾ ಕರ್ತವ್ಯದಲ್ಲಿ ಯಾವುದೇ ರೀತಿಯ ಅಸಡ್ಡೆ ಅಥವಾ ರ್ನಿಲಕ್ಷ$್ಯ ತೋರದೇ ಶೇ.100ರಷ್ಟು ಗುರಿ ಸಾಧಿಸಬೇಕು ಎಂದು ಸೂಚಿಸಿದರು.
ಕಾಲುಬಾಯಿ ಜ್ವರದಂತಹ ಸಾಂಕ್ರಾಮಿಕ ರೋಗದಿಂದ ಜಾನುವಾರು ರಕ್ಷಿಸಿಕೊಳ್ಳುವಂತೆ ಪಶುಪಾಲಕರಲ್ಲಿ ಅರಿವು ಮೂಡಿಸಬೇಕು. ಅಭಿಯಾನ ಪ್ರಗತಿ ಕುರಿತು ಎಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂಬ ವಿವರವನ್ನು ಅಧಿಕಾರಿಗಳು ಪ್ರತಿದಿನ ಸಲ್ಲಿಸಬೇಕು ಎಂದರು.
ಸ್ಥಳಿಯ ಪಂಚಾಯಿತಿಗಳು ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು. ಹಾಲಿನ ಡೇರಿ ಮತ್ತು ಪಶುಪಾಲನಾ ಕೇಂದ್ರಗಳ ಮುಂದೆ ಅಭಿಯಾನದ ಪೋಸ್ಟರ್ಗಳನ್ನು ಅಳವಡಿಸಿ ಪಶುಪಾಲಕರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಶಿವಪ್ರಸಾದ್ ಇದ್ದರು.