ಜಿಲ್ಲೆ

ಚಿರತೆ ದಾಳಿಗೆ ಐವರಿಗೆ ಗಾಯ; ಗಾಬರಿಯಾಗಿ ಸಿಕ್ಕವರಿಗೆಲ್ಲಾ ಪರಚಿದ ಚೀತಾ

ಡಾ.ಶ್ರೀಹರ್ಷ ಸೋರಲಮಾವು

ತುರುವೇಕೆರೆ: ತಾಲೂಕು ದಬ್ಬೇಘಟ್ಟ ಹೋಬಳಿ ಗೋಣಿತುಮಕೂರು ಮತ್ತು ಆಸುಪಾಸಿನ ಗ್ರಾಮದ ಐದು ಮಂದಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಗಾಯಗೊಂಡವರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಸಂಜೆ ನಡುವನಹಳ್ಳಿ ವನಜಾಕ್ಷಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಚಿರತೆ ಏಕಾ ಏಕಿ ದಾಳಿ ನಡೆಸಿದೆ. ಅಕ್ಕಪಕ್ಕ ತೋಟದ ರೈತರು ಗದ್ದಲ ಮಾಡಲಾಗಿ ಅಲ್ಲಿಂದ ಚಿರತೆ ಕಾಲ್ಕಿತ್ತಿದೆ. ಗಾಬರಿಯಾಗಿದ್ದ ಅದೇ ಚಿರತೆ ಗೋಣಿತುಮಕೂರು ಗ್ರಾಮದ ಹೊರ ವಲಯದ ತೋಟದಲ್ಲಿ ಕೃಷಿಚಟುವಟಿಕೆಯಲ್ಲಿ ತೊಡಗಿದ್ದ ಹುಚ್ಚಮ್ಮ, ಸಹಾಯಕ್ಕೆ ಬಂದ ಬೋರೇಗೌಡ ಮತ್ತು ಸಣ್ಣಲಿಂಗಯ್ಯರ ಕೈ, ಕಾಲು ಮತ್ತು ಬೆನ್ನಿನ ಮೇಲೆ ದಾಳಿ ಮಾಡಿದೆ.

ದೇವಿಹಳ್ಳಿ ತೋಟದ ಮನೆಯ ಶೇಖರಯ್ಯ ಶೆಡ್ಡಿನ ಮನೆಗೆ ನುಗ್ಗಿ ಅವರನ್ನೂ ಗಾಯಗೊಳಿಸಿದೆ ತಕ್ಷಣ ಶೆಡ್ಡಿನ ಬಾಗಿಲು ಹಾಕಿಕೊಂಡು ಶೇಖರಯ್ಯ ಹೊರ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು.

‘ಮೈಸೂರಿನಿಂದ ಅರವಳಿಕೆ ತಜ್ಞನ ವೈದ್ಯರು ಬರಲಿದ್ದು ತಡರಾತ್ರಿವರೆಗೂ ಚಿರತೆ ಸೆರೆ ಕಾರ್ಯಚರಣೆ ನಡೆಯಲಿದ್ದು, ಈಗಾಗಲೇ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ವೆಚ್ಚವನ್ನು ಇಲಾಖೆಯೇ ಬರಿಸಲಿದ್ದು ಯಾರಿಗೂ ಪ್ರಾಣಾಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಅಮಿತ್ ತಿಳಿಸಿದರು.’