ಕುಣಿಗಲ್: ತಿರುಪತಿಗೆ ಕೆಲಸಕ್ಕೆಂದು ಹೋಗಿ ಕಾಣೆಯಾಗಿದ್ದ ಕುಣಿಗಲ್ ತಾಲೂಕು ಸೊಬಗಾನಹಳ್ಳಿಯ ಬಾಲಕೃಷ್ಣ (35) ಬರೋಬ್ಬರಿ ಏಳು ವರ್ಷದ ಬಳಿಕ ಪತ್ತೆಯಾಗಿದ್ದು, ಕುಟುಂಬ ಸೇರಿದ್ದಾನೆ.
10 ವರ್ಷದ ಹಿಂದೆ ರಾಧಾ ಎಂಬಾಕೆಯನ್ನು ವಿವಾಹವಾಗಿದ್ದ ಬಾಲಕೃಷ್ಣಗೆ ಇಬ್ಬರು ಗಂಡು ಮಕ್ಕಳಿದ್ದು ಏಳು ವರ್ಷದ ಹಿಂದೆ ತಿರುಪತಿಯಲ್ಲಿ ಟೂರ್ಸ್ ಅಂಡ್ ಟ್ರಾವೆಲ್ ನಲ್ಲಿ ಉದ್ಯೋಗವಿದೆ ಎಂದು ಹೋದವನು ಮತ್ತೆ ವಾಪಸಾಗಿರಲಿಲ್ಲ.
ಅರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದ ಬಾಲಕೃಷ್ಣ ಸಾಲಗಾರರಿಂದ ಪಾರಾಗಲು ಅಜ್ಞಾತವಾಸದಲ್ಲಿದ್ದ ಎನ್ನಲಾಗಿದೆ. ತೆಲಂಗಾಣ ರಾಜ್ಯದ ಮೆಡ್‌ಚೆಲ್ ಸಿಟಿಯಲ್ಲಿ ಅಂಗಡಿ ಬಾಡಿಗೆ ಪಡೆದು ಟೂರ್ ಅಂಡ್ ಟ್ರಾವಲ್ಸ್ ವ್ಯವಹಾರ ನಡೆಸುತ್ತಿದ್ದವನು ಈಗ ಕುಟುಂಬ ಸದಸ್ಯರನ್ನು ಸೇರಿದ್ದಾನೆ.
ಬಾಲಕೃಷ್ಣ ಕೂಡ ಇರುವ ಕುಟುಂಬದ ಪಡಿತರ ಚೀಟಿ ಇತ್ತೀಚೆಗೆ ರದ್ದಾಗಿತ್ತು ಈ ಬಗ್ಗೆ ಆಹಾರ ಇಲಾಖೆಯಲ್ಲಿ ಬಾಲಕೃಷ್ಣ ಪತ್ನಿ ರಾಧಾ ವಿಚಾರಿಸಿದಾಗ ಏಳು ವರ್ಷದ ಹಿಂದೆ ಕಾಣೆಯಾಗಿದ್ದ ಪತಿ ಇರುವ ಬಗ್ಗೆ ತಿಳಿದಿದೆ.
ಐಟಿ ಫೈಲ್ ಮಾಡಿದ್ದ ಬಾಲಕೃಷ್ಣನ ಪಡಿತರ ಚೀಟಿ ಸ್ವಾಭಾವಿಕವಾಗಿ ರದ್ದಾಗಿದ್ದನ್ನು ತಿಳಿದ ಬಾಲಕೃಷ್ಣನ ತಾಯಿ ಭಾಗ್ಯಮ್ಮ ಅಕ್ಟೋಬರ್ 10 ರಂದು ಕುಣಿಗಲ್ ಪೊಲೀಸರಿಗೆ ಬಾಲಕೃಷ್ಣ ಕಾಣೆಯಾಗಿರುವ ಬಗ್ಗೆ ದೂರು ನೀಡಿದರು.
ಕುಣಿಗಲ್ ಪೊಲೀಸರು ತೆಲಂಗಾಣದ ಮೆಡ್‌ಚೆಲ್ ನಗರದಲ್ಲಿ ಬಾಲಕೃಷ್ಣನನ್ನು ಪತ್ತೆ ಮಾಡಿ ತಾಯಿ ಭಾಗ್ಯಮ್ಮ ಅವರ ವಶಕ್ಕೆ ನೀಡಿದ್ದಾರೆ.