ತುಮಕೂರು: ಸ್ವಾಮಿ ವಿವೇಕಾನಂದರು ಈ ದೇಶ ಕಂಡ ಶ್ರೇಷ್ಠ ಸಂತರು. ಯುವಕರನ್ನು ಹುರಿದುಂಬಿಸಿ ಬಡಿದೆಚ್ಚರಿಸುವ ಶಕ್ತಿ ಅವರಲ್ಲಿತ್ತು. ವಿವೇಕಾನಂದರ ತತ್ವಾದರ್ಶಗಳನ್ನು ಇಂದಿನ ಮಕ್ಕಳಿಗೆ ತಿಳಿಸಿದರೆ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಶ್ರೀಮಠದ ಉದ್ದಾನೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಆರೋಗ್ಯಯುತ ಸಮಾಜದ ಅವಶ್ಯಕತೆ ಬಹಳಷ್ಟಿದೆ. ದೈಹಿಕ ಶಿಕ್ಷಣ ಶಿಕ್ಷಕರು ಮೊದಲು ಸದೃಢರಾದರೆ, ಆ ಶಾಲೆ ಮಾದರಿಯಾಗಿ ರೂಪುಗೊಳ್ಳುತ್ತದೆ ಎಂದರು.
ರಾಷ್ಟ್ರೀಯ ಯುವ ದಿನದಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾಗಿದೆ. ಬದಲಾದ ಸನ್ನಿವೇಶಗಳು ಮತ್ತು ತಂತ್ರಜ್ಞಾನದ ಅಳವಡಿಕೆಗೆ ಇಂತಹ ಕಾರ್ಯಾಗಾರಗಳು ಉಪಯುಕ್ತ. ದೈಹಿಕ ಶಿಕ್ಷಣ ಶಿಕ್ಷಕರು ಹೊಸ ವಿಷಯಗಳಿಗೆ ತಮ್ಮನ್ನು ತೆರೆದುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಯ ಆಧಾರಸ್ತಂಭ. ಮಕ್ಕಳಲ್ಲಿ ಶಿಸ್ತು ಬೆಳೆಸುವ ಜವಾಬ್ದಾರಿ ನಿಮ್ಮದು, ಶಿಸ್ತಿನಿಂದ ನೀವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ, ಮಕ್ಕಳು ರಾಜ್ಯ, ರಾಷ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಆಶಿಸಿದರು.
ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸುತ್ತೇನೆ ಎಂದು ಎಂಎಲ್ಸಿ ಡಾ.ವೈ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ಸ್ವಾಮಿ ವಿವೇಕಾನಂದರ ಆಶೋತ್ತರಗಳನ್ನು ಈಡೇರಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಮತ್ತು ಕಾರ್ಯಕ್ರಮ ಯಶಸ್ವಯಾಗಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ ನುಡಿದರು.
ಮಕ್ಕಳಲ್ಲಿ ಅಗಾಧವಾದ ಶಕ್ತಿ ಮತ್ತು ಪ್ರತಿಭೆ ಇದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ನಿರ್ವಸಿದರೆ, ನಮ್ಮ ಮಕ್ಕಳು ಸಹಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧದಿಕಾರಿ ಡಾ.ಸೂರ್ಯಕಲಾ ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣಸ್ವಾಮಿ, ಭಾರತೀಯ ಕ್ರೀಡಾಪ್ರಾಧಿಕಾರದ ಅಥ್ಲೆಟಿಕ್ ಕೋಚ್ ಡಾ.ಲಕ್ಷ್ಮೀಶ್ ಶಿಕ್ಷಕರಿಗೆ ತರಗತಿ ನಡೆಸಿಕೊಟ್ಟರು.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಚಿದಾನಂದ ಗೌಡ, ರೂಪ್ಸಾ ಅಧ್ಯಕ್ಷ ತಾಳಿಕಟ್ಟೆ ಲೋಕೇಶ್, ಸಹ ಶಿಕ್ರಷಕರ ಸಂಘದ ಜಿಲ್ಲಾಧ್ಯಕ್ಷ ಉಮೇಶ್, ರಾಜ್ಯ ಸಂಘದ ಅಧ್ಯಕ್ಷ ಚೌಡಪ್ಪ, ಕಾರ್ಯದರ್ಶಿ ಚಂದ್ರಶೇಖರ , ವೆಂಕಟೇಶ್, ಪ್ರಭು, ಮೀನಾಕುಮಾರಿ, ಟಿಪಿಇಒಗಳಾದ ಗೋಪಾಲಕೃಷ್ಣ, ಶಮಂತ, ಚಂದ್ರಮ್ಮ, ಆಂಜಿನಪ್ಪ, ತಾಲೂಕು ಅಧ್ಯಕ್ಷ ಗಂಗಾಧರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಜಿ.ಲೋಕೇಶ್ ಸ್ವಾಗತಿಸಿ, ನಿವೃತ್ತ ಶಿಕ್ಷಕ ಎಂ.ಗಣೇಶ್ ವಂದಿಸಿದರು. ಶಿಕ್ಷಕರಾದ ರಂಗೇಗೌಡ ಮತ್ತು ಜಿ.ಎಂ.ಅನಿಲ್ ಕುಮಾರ್ ನಿರೂಪಿಸಿದರು.