oplus_0 
ಜಿಲ್ಲೆ

ಜಿಲ್ಲೆಯಲ್ಲಿ ಹಾಸ್ಟೆಲ್​ ಅವ್ಯವಸ್ಥೆ; ಎಚ್ಚೆತ್ತ ಜಿಲ್ಲಾಡಳಿತ?

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನಿರಂತರವಾಗಿ ವಿವಿಧ ಅವಘಡಗಳ ಮೂಲಕ ಮಕ್ಕಳ ಸಾವಿಗೂ ಕಾರಣವಾಗಿರುವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್​ ಅವ್ಯವಸ್ಥೆಯ ಬಗ್ಗೆ ಜಿಲ್ಲಾಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತೀವ್ರ ಬೇಸರ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಬೆನ್ನಹಿಂದಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಸಲು ಪರದಾಡುತ್ತಿರುವ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಖುದ್ದು ಅವರೇ ಹಾಸ್ಟೆಲ್​ಗಳಿಗೆ ಭೇಟಿ ನೀಡಿ ಪರಿಶೀಲಿಸಲಾರಂಭಿಸಿದ್ದಾರೆ. ಶನಿವಾರ ಸಂಜೆ ತುಮಕೂರಿನ ಮೆಳೆಕೋಟೆ ಅಲ್ಪಸಂಖ್ಯಾತರ ಮೆಟ್ರಿಕ್​ ನಂತರದ ಬಾಲಕರ ಹಾಗೂ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಸ್ವಚ್ಛತೆ ಇಲ್ಲದ ವಿದ್ಯಾರ್ಥಿಗಳ ಕೊಠಡಿ, ಶೌಚಾಲಯ, ನಿಲಯದ ಆವರಣವನ್ನು ಗಮನಿಸಿದ ಅವರು ನಾಳೆಯೊಳಗಾಗಿ ಎಲ್ಲವನ್ನು ಸ್ವಚ್ಛವಾಗಿಡಬೇಕು. ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸರ್ಕಾರದಿಂದ ಸಂಬಳ ಪಡೆಯುತ್ತಿಲ್ಲವೇ? ಕೆಲಸ ಮಾಡಲು ಉದಾಸೀನವೇಕೆ? ಎಂದು ನಿಲಯದ ವಾರ್ಡನ್​ ವೆಂಕಟೇಶ್​ಗೆ ತರಾಟೆಗೆ ತೆಗೆದುಕೊಂಡರು.

ಸರ್ಕಾರದಿಂದ ಒದಗಿಸಿರುವ ವಾಷಿಂಗ್​ ಮೆಷಿನ್​ ಮೂಲೆ ಸೇರಿದ್ದರೂ ಕೂಡಲೇ ದುರಸ್ತಿಪಡಿಸಿ ಉಪಯೋಗಿಸಲು ಏನು ಸಮಸ್ಯೆ? ಹೊಡೆದು ಹೋದ ಕಿಟಕಿ-, ಬಾಗಿಲುಗಳನ್ನು ಸರಿಪಡಿಸಿಲ್ಲ. ಮೆನು ಚಾರ್ಟ್​ನಲ್ಲಿರುವಂತೆ ಮಧ್ಯಾಹ್ನದ ಊಟದಲ್ಲಿ ವಿದ್ಯಾರ್ಥಿಗಳಿಗೆ ಮುದ್ದೆ ನೀಡದೆ ಅನ್ನ, ಸಾರು ಮಾತ್ರ ನೀಡಲಾಗಿದೆ ಎಂದರು.

ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದೇನೆ, ಪ್ರತಿದಿನ ವಿದ್ಯಾರ್ಥಿನಿಲಯವನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ನಿಲಯದಲ್ಲಿರುವ ಲೋಪದೋಷಗಳ ಬಗ್ಗೆ ಕೇಂದ್ರ ಕಚೇರಿಗೆ ವರದಿ ನೀಡುತ್ತೇನೆ ಎಂದು ನಿಲಯದ ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಿದರು.