ತುಮಕೂರು: ಸತತ 35ನೇ ವರ್ಷ ತುಮಕೂರು ದಸರಾ ಸಮಿತಿ ತುಮಕೂರಿನಲ್ಲಿ ಸಂಭ್ರಮದ ದಸರಾ ಆಚರಿಸುವ ಮೂಲಕ ದಾಖಲೆ ಬರೆಯಿತು.
ಗುರುವಾರ ಸಂಜೆ ನಗರದ ಶ್ರೀರಾಮ ಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀಶಿವಸಿದ್ಧೇಶ್ವರ ಸ್ವಾಮೀಜಿ ಸಾಂಪ್ರದಾಯಕ ಶಮೀ ಪೂಜೆ ನೆರವೇರಿಸಿದರು.
ಶ್ರೀಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ದಸರಾದಂತಹ ಉತ್ಸವಗಳು ಚಿಂತನೆಗೆ ಅವಕಾಶ ಆಗಬೇಕೇ ಹೊರತು ಆಡಂಬರವಾಗಬಾರದು. ನವರಾತ್ರಿ ಆಚರಣೆ ಧಾರ್ಮಿಕ, ಸಾಂಸ್ಕತಿಕ ಹಾಗೂ ಆಧ್ಯಾತ್ಮಿಕ ಮಹತ್ವ ಹೊಂದಿದೆ. 9 ಶಕ್ತಿಗಳನ್ನು ದುರ್ಗೆಯ 9 ಅವತಾರಗಳಲ್ಲಿ ಆರಾಧನೆ ಮಾಡುತ್ತೇವೆ. ನವರಾತ್ರಿಯನ್ನು ದೇಶಾದ್ಯಂತ ಸ್ಥಳಿಯ ಸಾಂಸತಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ವೈಭವದಿಂದ ಆಚರಿಸಲಾಗುತ್ತದೆ ಎಂದರು.
ನಮ್ಮ ಧಾರ್ಮಿಕ, ಸಾಂಪ್ರದಾಯಕ ಮಹತ್ವವನ್ನು ಹಬ್ಬಗಳ ಆಚರಣೆ ಮೂಲಕ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ನಮ್ಮ ಸಂಸ್ಕತಿ, ಸಂಪ್ರದಾಯ, ಧಾರ್ಮಿಕ ಪರಂಪರೆಯನ್ನು ತಿಳಿಸಲು ಸಹಾಯಕವಾಗುತ್ತದೆ. ಹೀಗಾಗಿ ಹಬ್ಬಗಳಿಗೆ ನಮ್ಮಲ್ಲಿ ಮಹತ್ವದವಿದೆ. ವಿಜಯನಗರ ಅರಸರು ದಸರಾ ಆಚರಣೆ ಆರಂಭಿಸಿದರು. ತುಮಕೂರು ದಸರಾ ಸಮಿತಿ ಕಳೆದ 35 ವರ್ಷಗಳಿಂದ ವಿಜಯನಗರ ಅರಸರ ಆಶಯದಂತೆ ಆಚರಣೆ ನಡೆಸಿಕೊಂಡು ಬಂದಿದೆ. ಮುಂದೆಯೂ ಹೀಗೆ ಮುಂದುವರೆಯಲಿ ಎಂದರು.
ಭಾರತೀಯ ಕುಟುಂಬ ವ್ಯವಸ್ಥೆ ಸದೃಢಗೊಳಿಸುವ, ಗುರುಹಿರಿಯರನ್ನು ಗೌರವಿಸುವ, ಸ್ವದೇಶಿ ವಸ್ತುಗಳನ್ನು ಬಳಸುವ, ಪರಿಸರ ಪ್ರಜ್ಞೆ ಬೆಳೆಸುವ, ಈ ನೆಲದ ಕಾನೂನು ಗೌರವಿಸುವ ಚಿಂತನೆಗಳೂ ದಸರಾ ಉತ್ಸವಗಳ ಆಶಯಗಳಾಗಲಿ. ದಸರಾವು ಆಧ್ಯಾತ್ಮ ವಿಚಾರವನ್ನೂ ಒಳಗೊಂಡಿದೆ. ಅಂತರಂಗಶುದ್ಧಿಗಾಗಿ ನಮ್ಮ ದೇಹದಲ್ಲಿರುವ ನವ ದುಷ್ಟಶಕ್ತಿಗಳ ದಮನ ಮಾಡಬೇಕು. ನಮ್ಮೊಳಗಿನ ದುಷ್ಟ ಶಕ್ತಿಗಳ ವಿರುದ್ಧ ಜಯಗಳಿಸುವುದೂ ದಸರಾ ಆಚರಣೆಯ ಆಶಯವಾಗಲಿ ಎಂದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷಿ$್ಮಕಾಂತ್ ಮಾತನಾಡಿ, ಸಮಿತಿ ಆಚರಿಸುತ್ತಿರುವ ದಸರಾ ಕಾರ್ಯಕ್ರಮಗಳು ಸಜ್ಜನಿಕೆ, ಸಜ್ಜನರ ಸಮಾಗಮವಾಗಿದೆ. ಇಷ್ಟೂದಿನ ನಮ್ಮ ಕಲೆ, ಸಂಸತಿ, ಪರಂಪರೆ ಬಿಂಬಿಸುವ, ಭಾವೈಕ್ಯತೆ ಸಾರುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿತ್ತು ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ತುಮಕೂರು ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಆಚರಣಾ ಸಮಿತಿ ಅಧ್ಯಕ್ಷ ಡಾ.ಎಸ್.ಪರಮೇಶ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕ ಕೆ.ಎನ್.ಗೋವಿಂದರಾಜು, ಸಹ ಕಾರ್ಯದರ್ಶಿಗಳಾದ ಕೆ.ಪರಶುರಾಮಯ್ಯ, ಕೆ.ಶಂಕರ್ ಮತ್ತಿತರರು ಇದ್ದರು.
ದಸರಾ ಅಂಗವಾಗಿ ಆಯೋಜಿಸಿದ್ದ ರಂಗವಲ್ಲಿ ಸ್ಪರ್ಧೆಯಲ್ಲಿ ಸಿ.ಸೌಮ್ಯ ಪ್ರಥಮ, ಶೋಭಾ ಶ್ರೀಧರ್ ದ್ವೀತಿಯ, ಕೆ.ಗೀತಾ ತೃತೀಯ ಹಾಗೂ ಎ.ಪಿ.ರೋಹಿಣಿ ಸಮಾಧಾನಕರ ಬಹುಮಾನ ಪಡೆದರು. ಶಾಲಾಕಾಲೇಜು ವಿಭಾಗದ ಸಾಂಸತಿಕ ಸ್ಪರ್ಧೆಯಲ್ಲಿ ಮಹೇಶ್ ಪಿಯು ಕಾಲೇಜು ತಂಡ ಮೊದಲ ಸ್ಥಾನ, ಸಿಂಹಾದ್ರಿ ಕಾಲೇಜು ತಂಡ ಎರಡನೆ ಹಾಗೂ ಸಿದ್ಧರಾಮೇಶ್ವರ ಶಾಲೆ ತಂಡ ಮೂರನೇ ಸ್ಥಾನ ಪಡೆದು ಸಮಾರಂಭದಲ್ಲಿ ಬಹುಮಾನ ಸ್ವೀಕರಿಸಿದರು. ವೃತ್ತಿಪರ ತಂಡಗಳ ಸಾಂಸ್ಕತಿಕ ಸ್ಪರ್ಧೆಯಲ್ಲಿ ಇನ್ಫಿನೆಂಟ್ ಡ್ಯಾನ್ಸ್ ಸ್ಟುಡಿಯೊ ತಂಡ, ಶ್ಯಾಡೋಸ್ರಾಜ್ ಡ್ಯಾನ್ಸ್ ಅಕಾಡೆಮಿ, ಸೂರಿದೇವ ಡ್ಯಾನ್ಸ್ ಸ್ಕೂಲ್ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರೆ, ಎ ಟು ಜಡ್ ಆರ್ಟಿಸ್ಟ್ ಜೋನ್, ಪವರ್ ಡ್ಯಾನ್ಸ್ ಅಕಾಡೆಮಿ ತಂಡಗಳು ಸಮಾಧಾನಕರ ಬಹುಮಾನ ಪಡೆದವು. ಎಲ್ಲಾ ತಂಡಗಳಿಗೂ ನಗದು ಬಹುಮಾನ ಹಾಗೂ ಪಾರಿತೋಷಕ ವಿತರಿಸಲಾಯಿತು.