ಜಿಲ್ಲೆ

17 ಸಾವಿರ ರೂ. ದಾಟಿದ ಕೊಬ್ಬರಿ ರೈತರಲ್ಲಿ ಹರ್ಷ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯಲ್ಲಿ ಅನಿರೀಕ್ಷತ ಏರಿಕೆ ದಾಖಲಾಗಿದ್ದು ಗುರುವಾರದ ಹರಾಜಿನಲ್ಲಿ ಕ್ವಿಂಟಾಲ್​ ಕೊಬ್ಬರಿ ಬರೋಬ್ಬರಿ 17 ಸಾವಿರ ರೂ.ಗೆ ಮಾರಾಟವಾಗಿದೆ. ಕಳೆದೊಂದು ವರ್ಷದಿಂದಲೂ ರೈತರ ತೋಟದಲ್ಲಿ ತೆಂಗಿನಕಾಯಿ ಇಳುವರಿ ಕಡಿಮೆಯಾಗಿದ್ದು ಕೊಬ್ಬರಿ ಅವಕ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಸೋಮವಾರದ ಹರಾಜಿನಲ್ಲಿ 16 ಸಾವಿರ ರೂ.ಗೆ ಮಾರಾಟವಾಗಿದ್ದ ಕೊಬ್ಬರಿ ಸತತ ಎರಡನೇ ಹರಾಜಿನಲ್ಲಿ ಬರೋಬ್ಬರಿ 1 ಸಾವಿರ ರೂ. ಏರಿಕೆ ಕಂಡಿರುವುದು ತೆಂಗು ಬೆಳೆಗಾರರ ಹರ್ಷಕ್ಕೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು ಮುಂದಿನ ಹರಾಜುಗಳಲ್ಲಿ ಬೆಲೆ ಮತ್ತಷ್ಟು ಏರಿಕೆ ಕಂಡರೂ ಅಶ್ಚರ್ಯಪಡುವಂತಿಲ್ಲ ಎಂಬಂತಾಗಿದೆ.

ಕೊಬ್ಬರಿ ಕ್ವಿಂಟಾಲ್​ಗೆ ಗುರುವಾರ ಗರಿಷ್ಟ 17100ರೂ., ಕನಿಷ್ಟ 14000ರೂ. ಹಾಗೂ ಮಾದರಿ 17026ರೂ.ಗೆ ಹರಾಜಾಗುವ ಮೂಲಕ ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಹರಾಜಿನಲ್ಲಿ 2397 ಕ್ವಿಂಟಾಲ್​ ಅವಕ ಮಾತ್ರ ವ್ಯಾಪಾರಕ್ಕೆ ಬಂದಿದ್ದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ತಿಪಟೂರು ಕೊಬ್ಬರಿ ಧಾರಣೆ: ಕನಿಷ್ಟ: 14000 ಗರಿಷ್ಟ: 17100 ಮಾದರಿ: 17026 ಅವಕ: 2397 ಕ್ವಿಂಟಾಲ್​