ಸೋರಲಮಾವು ಶ್ರೀಹರ್ಷ
ತುಮಕೂರು: ಚೀಲವಿಲ್ಲದೆ ಜಿಲ್ಲೆಯಲ್ಲಿ ಎರಡು ದಿನ ಬಂದ್ ಆಗಿದ್ದ ಕೊಬ್ಬರಿ ಖರೀದಿ ಕೇಂದ್ರಗಳೀಗ ಸಾಗಿಸಲು ಲಾರಿಗಳಿಲ್ಲದೆ ಮೂರು ದಿನ ಸ್ಥಗಿತಗೊಳ್ಳಲಿವೆ.
ನಫೆಡ್ ಮೂಲಕ ಖರೀದಿಸಿದ ಉಂಡೆ ಕೊಬ್ಬರಿಗಳನ್ನು ಸರಬರಾಜು ಮಾಡಲು ಲಾರಿ ನೀಡದ ಹಿನ್ನೆಲೆಯಲ್ಲಿ ತಿಪಟೂರಿನ ಮೂರು ಖರೀದಿ ಕೇಂದ್ರಗಳು ಮೇ.29, 30 ಹಾಗೂ 31ರಂದು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಪಟೂರು ಎಪಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕೊಬ್ಬರಿ ಖರೀದಿಸುತ್ತಿರುವ ಕೇಂದ್ರಗಳಲ್ಲಿ ಚೀಲಕ್ಕೆ ಅಭಾವ ಎದುರಾಗಿದ್ದು ಈಗಾಗಲೇ ಎರಡು ದಿನ ಕಡ್ಡಾಯ ರಜೆ ಘೋಷಿಸಲಾಗಿದ್ದರಿಂದ ಎಪಿಎಂಸಿ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿವೆ. ಈಗ ಮತ್ತೊಮ್ಮೆ ಮೂರು ದಿನ ರಜೆ ಎಂದಿರುವುದು ರೈತರ ಆತಂಕ ಹೆಚ್ಚಿಸಿದೆ.
ಜಿಲ್ಲೆಯ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಗೋಣಿಚೀಲದ ಅಭಾವದ ಕಾರಣಕ್ಕೆ ಮೇ.24 ಹಾಗೂ ಮೇ.25ರಂದು ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಅಂದು ಕೊಬ್ಬರಿ ತರಲು ಸೂಚಿಸಿದ್ದ ರೈತರಿಗೆ ಮೇ.27 ಮತ್ತು 28ರಂದು ಖರೀದಿಗೆ ಬರುವಂತೆ ಮರು ದಿನಾಂಕ ನಿಗದಿಗೊಳಿಸಲಾಗಿದ್ದರೂ ಲಾರಿಗಳಿಲ್ಲದೆ ಖರೀದಿ ಕಷ್ಟವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಖರೀದಿ ಕೇಂದ್ರಗಳ ನೋಡಲ್ ಏಜೆನ್ಸಿಯಾಗಿದ್ದು ಉಂಡೆಕೊಬ್ಬರಿ ಶೇಖರಿಸಲು ಅಗತ್ಯವಾದ ಗೋಣಚೀಲ ಹಾಗೂ ಲಾರಿ ಸರಬರಾಜು ಮಾಡಲು ವಿಳಂಬ ಮಾಡಿರುವುದು ಹೊಸ ಸಮಸ್ಯೆ ತಂದೊಡ್ಡಿದೆ.
ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಫೆಡ್ ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿ ಸಹಯೋಗದಲ್ಲಿ ಕೊಬ್ಬರಿ ಖರೀದಿ ಮಾಡಿಕೊಳ್ಳಲಾಗುತ್ತಿದೆ. ಜೂನ್ ಎರಡನೇ ವಾರದಲ್ಲಿ ಕೊಬ್ಬರಿ ಖರೀದಿ ಸ್ಥಗಿತವಾಗುವ ಸಾಧ್ಯತೆಯಿದ್ದು ರೈತರು ಭಯಬೀಳುವಂತಾಗಿದೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿದ ಕೊಬ್ಬರಿಗೆ ಸಕಾಲದಲ್ಲಿ ಹಣ ಪಾವತಿಸದ ಸರ್ಕಾರದ ಧೋರಣೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುವ ಸೇನೆ ಸಾಮೂಹಿಕ ನಾಯಕತ್ವದಲ್ಲಿ `ನಮ್ಮ ಕೊಬ್ಬರಿ-ನಮ್ಮ ಹಣ-ನಮ್ಮ ಹಕ್ಕು' ಎಂಬ ಚಳವಳಿ ಆರಂಭಿಸಿದೆ.
ತಿಪಟೂರು ವಿಭಾಗಾಧಿಕಾರಿಗೆ ಸೋಮವಾರ ಪತ್ರ ನೀಡಿರುವ ಚಳವಳಿಗಾರರು ನಾವು ಮಾರಾಟ ಮಾಡಿದ್ದ ಕೊಬ್ಬರಿಯನ್ನು ಹಿಂಪಡೆಯಲು ನಿರ್ಧರಿಸಿದ್ದು ಸರ್ಕಾರದ ಭಾಗವಾಗಿರುವ ತಾಲೂಕು ಆಡಳಿತ ಕೊಬ್ಬರಿಯನ್ನು ವಾಪಸ್ ಕೊಡಿಸಬೇಕು ತಪ್ಪಿದರೆ ರೈತರೇ ಖರೀದಿ ಕೇಂದ್ರಗಳಿAದ ಕೊಬ್ಬರಿ ವಾಪಸ್ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಲಿಖಿತವಾಗಿಯೇ ನೀಡಿರುವುದು ಪ್ರಕರಣದ ಗಂಭೀರತೆ ಹೆಚ್ಚಿಸಿದೆ.
ನಫೆಡ್ ಮೂಲಕ ಉಂಡೆ ಕೊಬ್ಬರಿ ಖರೀದಿಸಲು ಗುತ್ತಿಗೆದಾರರು ಸರಿಯಾಗಿ ಲಾರಿ ಸರಬರಾಜು ಮಾಡುತ್ತಿಲ್ಲವಾದ್ದರಿಂದ ಎಪಿಎಂಸಿ ಪ್ರಾಂಗಣಕ್ಕೆ ಬಂದಿರುವ ರೈತರಿಂದ ಕೊಬ್ಬರಿ ಖರೀದಿ ಮಾಡಲು ತಡವಾಗುತ್ತಿದೆ ಹಾಗಾಗಿ ಮೇ.31ರಂದು ತಿಪಟೂರು ಎಪಿಎಂಸಿ ಪ್ರಾಂಗಣದಲ್ಲಿ ಯಾವುದೇ ಖರೀದಿ ನಡೆಯುವುದಿಲ್ಲ, ಮೇ.29, 30 ಹಾಗೂ 31ರಂದು ತಿಪಟೂರು 3, 3ಎ ಹಾಗೂ 3ಬಿ ಖರೀದಿ ಕೇಂದ್ರದಲ್ಲಿ ಖರೀದಿ ನಡೆಯುವುದಿಲ್ಲ.
ನ್ಯಾಮಗೌಡ
ಕಾರ್ಯದರ್ಶಿ, ತಿಪಟೂರು ಎಪಿಎಂಸಿ