ಜಿಲ್ಲೆ

ಕೈ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ: ಮಾಜಿ ಶಾಸಕ ಕೆ.ಷಡಕ್ಷರಿ ಭರವಸೆ

Tumakuru

ತಿಪಟೂರು: ಜೈಕಾರ ಪಕ್ಷಕ್ಕಿರಲಿ, ನಾಯಕರಿಗೆ ಬೇಡ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬಂದರೆ ಬಡವರಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಹೇಳಿದರು.

ಆಗಸ್ಟ್​ 1ರಿಂದ 7 ದಿನ ಹಮ್ಮಿಕೊಂಡಿರುವ ಹೋಬಳಿ ಮಟ್ಟದ ಪಾದಯಾತ್ರೆ ಹಾಗೂ ಸ್ವಾತಂತ್ರೊತ್ಸವದ ಅಮೃತೋತ್ಸವ ಪ್ರಯುಕ್ತ ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮ ಪ್ರಾರಂಭದಲ್ಲಿ ಕಾಂಗ್ರೆಸ್​ ಮುಖಂಡ ಲೋಕೇಶ್ವರ್​ ಅಭಿಮಾನಿಗಳು ಜೈಕಾರ ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಷಡಕ್ಷರಿ, ಇನ್ನು ಮುಂದೆ ಯಾರಿಗೂ ಜೈಕಾರ ಹಾಕಬೇಡಿ, ಜೈಕಾರ ಪಕ್ಷಕ್ಕೆ ಸೀಮಿತವಾಗಿರಲಿ ಎಂದರು.

ವಿಧಾನಸಭೆ ಚುನಾವಣೆಗೆ ನನಗೆ ಟಿಕೆಟ್​ ಖಾತ್ರಿ ಎಂದು ಹೇಳಿಕೊಂಡು ಓಡಾಡುತ್ತಿರುವವರ ವಿರುದ್ಧ ಸಿಡಿಮಿಡಿಗೊಂಡ ಷಡಕ್ಷರಿ, ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರೇ ಹೇಳಿರುವಂತೆ ಪಕ್ಷದ ಕಾರ್ಯಕರ್ತರೆಲ್ಲರೂ ಮುಖ್ಯಮಂತ್ರಿಗಳೇ. ಯಾರೇ ಆಗಲಿ ಪಕ್ಷದ ಸಿದ್ಧಾಂತಕ್ಕೆ ಬದ್ಧಗಿರಬೇಕು. ಚುನಾವಣೆಗೂ ಮುಂಚೆ, ನನಗೇ ಟಿಕೆಟ್​ ಖಾತ್ರಿಯಾಗಿದೆ ಎಂದು ಹೇಳಿಕೊಳ್ಳುವವರಿಗೆ ನೋಟಿಸ್​ ನೀಡಲಾಗುವದು ಎಂದು ಎಚ್ಚರಿಸಿದರು.

ಪಕ್ಷಕ್ಕೆ 130 ವರ್ಷಗಳ ಇತಿಹಾಸವಿದೆ. ಕಾಂಗ್ರೆಸ್​ ದೇಶಕ್ಕೆ ಸ್ವಾತಂತ್ರ ತಂದುಕೊಡುವಾಗ ಬಿಜೆಪಿಗರು ಎಲ್ಲಿದ್ದರು? ದೇಶದಲ್ಲಿರುವುದು ಗಂಡು&ಹೆಣ್ಣು ಎರಡೇ ಜಾತಿ. ಆದರೆ ದೇಶದಲ್ಲಿರುವ ಅಂದಾಜು 18&20 ಕೋಟಿ ಮುಸಲ್ಮಾನರ ಮತಗಳು ನಮಗೆ ಬೇಕಿಲ್ಲ ಎಂದು ಹೇಳುವ ಮೂಲಕ ಹಿಂದುಗಳ ಮತ ಪಡೆಯುವ ಗಿಮಿಕ್​ ರಾಜಕಾರಣ ಮಾಡುತ್ತಿದ್ದಾರೆ. ಇಡೀ ದೇಶವನ್ನು ನಾಲ್ಕು ಜನರಿಗೆ ಮಾರಿದ್ದಾರೆ. ಇವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಅಧಿಕಾರಕ್ಕೆ ಬಂದ ಕೂಡಲೇ 2ಕೋಟಿ ಉದ್ಯೋಗ ಸೃಷ್ಟಿ, ಬಡವರಿಗೆ ತಲಾ 15 ಲಕ್ಷ ಹಣ ನೀಡುವ ಭರವಸೆ ಏನಾಯ್ತು? ಮತದಾರರು, ಎಚ್ಚೆತ್ತುಕೊಂಡು ಬರಲಿರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸದಿದ್ದರೆ ಮುಂದಿನ ದಿನಗಳು ಕಷ್ಟಕರವಾಗಿರಲಿವೆ ಎಂದರು.

ಬಿಜೆಪಿ ಹುಳುಕು ಜನರಿಗೆ ಮನದಟ್ಟು ಮಾಡಲು ಇದು ಸಕಾಲ: ಕಾಂಗ್ರೆಸ್​ ಸರ್ಕಾರ ದೇಶದಲ್ಲಿ ಒಟ್ಟು 652 ಸಾರ್ವಜನಿಕ ಉದ್ದಿಮೆಗಳನ್ನು ಸೃಷ್ಟಿಸುವ ಮೂಲಕ ವ್ಯಾಪಕ ಉದ್ಯೋಗಾವಕಾಶ ಕಲ್ಪಿಸಿತ್ತು. ಆದರೆ ಮೋದಿ ಸರ್ಕಾರ ಇವೆಲ್ಲವನ್ನೂ ಮಾರಲು ಮುಂದಾಗಿದೆ. ಸಿಂಧೂ ನಾಗರಿಕತೆಯ ಪವಿತ್ರ ಭಾರತಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. 1855ರಲ್ಲಿ ಸ್ಥಾಪಿತಗೊಂಡ ಕಾಂಗ್ರೆಸ್​, ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದೆ. ಸಲ್ಲದ ವಿಚಾರಕ್ಕೆ ನೆಹರು, ಸೋನಿಯಾರ ವಿರುದ್ಧ ಹರಿ ಹಾಯುವವರು ನೈಜ ಸ್ಥಿತಿಯನ್ನು ಮರೆ ಮಾಚುತ್ತಿದ್ದಾರೆ ಎಂದು ಮುಖಂಡ ಲೋಕೇಶ್ವರ್​ ಆರೋಪಿಸಿದರು.
ಅಂದು ಏನೂ ಇಲ್ಲದಿದ್ದಾಗ ಪಾಕ್​ ಮತ್ತು ಚೀನಾ ವಿರುದ್ಧ ನಮ್ಮ ಸೈನಿಕರು ತೊಡೆ ತಟ್ಟಿದ್ದರು. ಆದರೆ ಈಗ ಮೋದಿ ಸರ್ಕಾರದಲ್ಲಿ ಎಲ್ಲವೂ ಇದ್ದರೂ ಪುಲ್ವಾಮಾ ಗಡಿಯಲ್ಲಿ ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳುವಂತಾಯ್ತು. ಏರ್​ಸ್ಟೆರ್ಕ್​ ಮಾಡಿದೆವು ಎಂಬುದೆಲ್ಲಾ ಸುಳ್ಳು. ಬಿಜೆಪಿ ಹುಳುಕುಗಳನ್ನೆಲ್ಲಾ ಜನರಿಗೆ ಮನದಟ್ಟು ಮಾಡಲು ಇದು ಸಕಾಲ. ಪಾದಯಾತ್ರೆಯಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಜನರನ್ನು ಜಾಗೃತಗೊಳಿಸಿ ಎಂದರು.

ಪಾದಯಾತ್ರೆಗೆ ಸಿದ್ಧತೆ: ಆ.1 ರಿಂದ 8ರವರೆಗೂ ತಾಲೂಕಿನ ಹೊನ್ನವಳ್ಳಿ ಹೋಬಳಿ, ನೊಣವಿನಕೆರೆ, ಕಿಬ್ಬನಹಳ್ಳಿ, ಕಸಬಾ, ಹೋಬಳಿಗಳಲ್ಲಿ ಹಂತ, ಹಂತವಾಗಿ ಅಂದಾಜು 135 ಕಿಮೀಗಳಿಗೂ ಹೆಚ್ಚು ದೂರ ಕಾಂಗ್ರೆಸ್​ ಪಾದಯಾತ್ರೆ ನಡೆಸಲಿದ್ದು, ಆ.8 ರಂದು ಸಂಜೆ ನಗರದ ಗಾಂಧಿ ನಗರದ ಪೊಲೀಸ್​ ಚೌಕಿಯಲ್ಲಿ ಪಾದಯಾತ್ರೆ ಸಮಾರೋಪಗೊಳ್ಳಲಿದೆ.

ಚಡ್ಡಿ ಸುಡುವ ಮೂಲಕ ಕೇವಲ ಸಾಂಕೇತಿಕ ಪ್ರತಿಭಟನೆ ಮಾಡಿದ ಎನ್​ಎಸ್​ಯುಐ ವಿದ್ಯಾರ್ಥಿಗಳು ದೇಶದ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಅವರನ್ನು ದೆಹಲಿಗೆ ಕರೆಸಿ ಸನ್ಮಾನಿಸಲಾಗಿದೆ.

ಲೋಕೇಶ್ವರ್​ ಕಾಂಗ್ರೆಸ್​ ಮುಖಂಡ