ಜಿಲ್ಲೆ

ತುಮಕೂರು ಜಿಲ್ಲೆಯಲ್ಲಿ 13 ಬಾಲ್ಯ ವಿವಾಹ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಿಲ್ಲೆಯಲ್ಲಿ ಕಳೆದ 2024ರ ಏಪ್ರಿಲ್​ ಮಾಹೆಯಿಂದ ಡಿಸೆಂಬರ್​ವರೆಗೆ ಅಧಿಕೃತವಾಗಿ 13 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಬಾಲ್ಯ ವಿವಾಹವನ್ನು ತಡೆಯುವಲ್ಲಿ ಜಿಲ್ಲಾಡಳಿತ ಕೈಚೆಲ್ಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2 ಮತ್ತು 3ನೇ ತ್ರೆೃಮಾಸಿಕಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಆಘಾತಕಾರಿ ವಿಷಯವನ್ನು ಅಧಿಕಾರಿಗಳೇ ಬಹಿರಂಗಪಡಿಸಿದರು.

ಬಾಲ್ಯ ವಿವಾಹಗಳು ನಡೆಯುವಾಗ ಅಧಿಕಾರಿಗಳ ಗಮನಕ್ಕೆ ಏಕೆೆ ಬಂದಿಲ್ಲ? ಇಂತಹ ಪ್ರಕರಣಗಳು ಮರುಕಳಿಸಬಾರದು. ಕರ್ತವ್ಯ ರ್ನಿಲಕ್ಷತೆ ತೋರುವ ಯಾವುದೇ ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರೆಸಬಾರದು ಎಂದು ಜಿಲ್ಲಾಧಿಕಾರಿ ಅವರ ಎಂದಿನ ಶೈಲಿಯಲ್ಲಿಯೇ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಬಾಲ್ಯ ವಿವಾಹಗಳು ನಡೆಯದಂತೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸಾಂತ್ವನ ಕೇಂದ್ರಗಳು ಮಹಿಳೆಯರು ಸುಲಭವಾಗಿ ಗುರುತಿಸಿರುವ ಸ್ಥಳದಲ್ಲಿರಬೇಕು. ಕೇಂದ್ರದಲ್ಲಿ ಶೋಷಣೆಗೊಳಗಾದ, ನೊಂದ ಮಹಿಳೆಯರ ರಕ್ಷಣೆ, ಕಾನೂನಿನ ನೆರವು, ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ ಇತ್ಯಾದಿ ನೆರವುಗಳನ್ನು ಒದಗಿಸಬೇಕು. ಸಾಂತ್ವನ ಕೇಂದ್ರಗಳಲ್ಲಿ ಸ್ವೀಕರಿಸಲಾದ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಶೀಘ್ರವಾಗಿ ವಿಲೇ ಮಾಡಬೇಕು ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್​ ಕುಮಾರ್​ ಮಾತನಾಡಿ, ಸ್ವೀಕಾರ ಕೇಂದ್ರ, ಸಖಿ ಒನ್​ ಸ್ಟಾಪ್​ ಸೆಂಟರ್​, ಉದ್ಯೋಗಿನಿ ಯೋಜನೆ, ಚೇತನ ಯೋಜನೆ, ಧನಶ್ರೀ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಮಾಹಿತಿಯನ್ನು ಸಭೆಗೆ ತಿಳಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್​ ಇದ್ದರು