ತುಮಕೂರು: ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವ ಗ್ರಾಹಕರ ನೆಮ್ಮದಿ ಕೆಡಿಸಿರುವ `ಇ-ಕೆವೈಸಿ' ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ನಡೆದಿದ್ದು ಡಿ.31 ಕೊನೆಯ ದಿನವಲ್ಲ ಎಂದು ಸ್ಪಷ್ಟಪಡಿಸಿದೆ.
ತುಮಕೂರು ಸೇರಿದಂತೆ ಜಿಲ್ಲೆಯೆಲ್ಲೆಡೆ ಗ್ಯಾಸ್ ಏಜೆನ್ಸಿಗಳ ಕಚೇರಿಗಳ ಮುಂದೆ ಸರತಿಯಲ್ಲಿ ನಿಂತು ಇ-ಕೆವೈಸಿ ಮಾಡಿಸುತ್ತಿರುವ ಗ್ರಾಹಕರಿಂದ 200ರೂ. ಶುಲ್ಕ ಪಡೆಯುತ್ತಿರುವ ಬಗ್ಗೆ ವ್ಯಾಪಕ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಗ್ಯಾಸ್ ಏಜಿನ್ಸಿ ಮಾಲೀಕರ ಸಭೆ ನಡೆಸಿ ಸೂಚನೆ ನೀಡಿದೆ.
ಡಿ.31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಅಡುಗೆ ಅನಿಲ ಸಂಪರ್ಕ ರದ್ದಾಗಲಿದೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಗಳ ಹಿನ್ನೆಲೆಯಲ್ಲಿ ಜಿಲ್ಲೆಯೆಲ್ಲೆಡೆ ಏಕಕಾಲದಲ್ಲಿ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ಮುಂದೆ ನಿಲ್ಲಲು ಆರಂಭಿಸಿದ್ದು, ನೆಟ್‌ವರ್ಕ್ ಸಮಸ್ಯೆಯಿಂದ
ದಿನವಿಡೀ ಕಾದು ಹೈರಾಣಾಗುತ್ತಿದ್ದಾರೆ.
ಮೃತರು, ನಕಲಿ ಗ್ರಾಹಕರನ್ನು ಪತ್ತೆ ಹಚ್ಚಲು ಗ್ರಾಹಕರ ಇ-ಕೆವೈಸಿ ಮಾಡಿಸುವಂತೆ ಕೇಂದ್ರ ಸರ್ಕಾರ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ನೀಡಿದೆ, ಕೆಲವು ಪೆಟ್ರೋಲಿಯಂ ಕಂಪನಿಗಳು ಡಿ.31ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಏಜೆನ್ಸಿಗಳಿಗೆ ಗಡುವು ನೀಡಿದೆಯಾದರೂ ಇದು ಆ ಸಂಸ್ಥೆಯ ಆಂತರಿಕ ವಿಷಯವಷ್ಟೇ. ಆಧಾರ್ ಜೋಡಣೆ ತಡವಾದರೂ ಗ್ರಾಹಕರು ಭಯಪಟ್ಟು ದುಂಬಾಲು ಬೀಳುವ ಅಗತ್ಯವಿಲ್ಲ ಎಂದು ಆಹಾರ ಇಲಾಖೆ ಜಂಟಿ ನಿರ್ದೆಶಕ ಮಂಟೇಸ್ವಾಮಿ ತಿಳಿಸಿದ್ದಾರೆ.