ಜಿಲ್ಲೆ

ಬಸವಾದಿ ಶರಣರ ವೈಭವ ರಥಯಾತ್ರೆ

ತುಮಕೂರು: ಕರ್ನಾಟಕ ಸಾಂಸತಿಕ ನಾಯಕ , ವಿಶ್ವ ಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಏ.17 ರಿಂದ 29ರ ವರೆಗೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ ಶನಿವಾರ ತುಮಕೂರಿಗೆ ಆಗಮಿಸಿತು.

ಜಿಲ್ಲಾಧಿಕಾರಿ ಶುಭಕಲ್ಯಾಣ್​ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಥಯಾತ್ರೆ ಸ್ವಾಗತಿಸಿ ಮಾತನಾಡಿ, ಬಾಗಲಕೋಟೆ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ಏ.29 ಹಾಗೂ 30ರಂದು ಆಯೋಜಿಸಿರುವ ಅನುಭವ ಮಂಟಪ- ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ಈ ರಥಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು.

ವಿಧಾನಸೌಧದ ಮುಂಭಾಗದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏಪ್ರಿಲ್​ 17ರಂದು ರಥಯಾತ್ರೆಗೆ ಚಾಲನೆ ನೀಡಿದ್ದು, ರಥಯಾತ್ರೆಯು ನಾಡಿನಾದ್ಯಂತ ಸಂಚರಿಸಿ ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ಪ್ರಚುರಪಡಿಸಲಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸ್ವಾತಂತ್ರ್ಯದ ಬಗ್ಗೆ ನಾವೆಲ್ಲಾ ಇಂದು ಮಾತನಾಡುತ್ತಿದ್ದೇವೆ. ಆದರೆ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಮಹಿಳೆಯರು ಸೇರಿದಂತೆ ಎಲ್ಲಾ ಕಾಯಕ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು. ಸಾಮಾಜಿಕ ತಾರತಮ್ಯ, ಲಿಂಗತಾರತಮ್ಯ, ಮೂಢ ನಂಬಿಕೆಗಳನ್ನು ಹೋಗಲಾಡಿಸಲು 800 ವರ್ಷಗಳ ಹಿಂದೆಯೇ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಬಸವಣ್ಣನವರ ಮಹತ್ವವನ್ನು ನಾಡಿಗೆ ಸಾರಲು ಹೊರಟಿರುವುದು ಶ್ಲಾಘನೀಯ. ನಮ್ಮ ಜಿಲ್ಲೆಯಲ್ಲಿಯೂ ಬಸವಣ್ಣನವರ ವಚನಗಳ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಜಿಲ್ಲಾಡಳಿತದಿಂದ ತಯಾರಿ ನಡೆಸಲಾಗುವುದು ಎಂದರು.

ನಗರ ಶಾಸಕ ಜಿ.ಬಿ.ಜೋತಿಗಣೇಶ್​ ಮಾತನಾಡಿ, ಬಸವಣ್ಣನವರ ಜಯಂತಿ ಅಂಗವಾಗಿ ಅವರ ಬದುಕು, ತತ್ವಗಳನ್ನು ಜನತೆಗೆ ತಿಳಿಸಲು ಸರಕಾರ ಕೈಗೊಂಡಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ ಇಂದು ತುಮಕೂರಿಗೆ ಆಗಮಿಸಿದೆ. ಬಸವಣ್ಣನವರ ವಚನಗಳ ಸಾರವನ್ನು ತಿಳಿದು ನಡೆದರೆ, ಕಲ್ಯಾಣ ರಾಜ್ಯ ಸಾಕಾರಗೊಳ್ಳಲಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಮಾತನಾಡಿ, ಬಸವಾದಿ ಶರಣರ ಸಂದೇಶಗಳನ್ನು ಸರಕಾರ ನಾಡಿಗೆ ಪಸರಿಸಲು ಹೊರಟಿರುವುದು ಸ್ವಾಗತಾರ್ಹ. ಶಾಲಾ, ಕಾಲೇಜುಗಳಲ್ಲಿ ಬಸವಣ್ಣನವರ ಬಗ್ಗೆ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ನಡೆಸುವುದರ ಜತೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಸವಭವನ ನಿಮಾರ್ಣ ಮಾಡಬೇಕೆಂಬುದು ಬಹು ಜನರ ಬೇಡಿಕೆಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂಬುದು ಶರಣರ ಒತ್ತಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಪರಮೇಶ್​, ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಜಿ.ಎಸ್​.ಚಂದ್ರಮೌಳಿ, ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ, ತಹಸೀಲ್ದಾರ್​ ರಾಜೇಶ್ವರಿ, ಮುಖಂಡರಾದ ಸದಾಶಿವಯ್ಯ, ಎಂ.ಜಿ. ಸಿದ್ದರಾಮಯ್ಯ ಮತ್ತಿತರರು ಇದ್ದರು.