ಜಿಲ್ಲೆ

ಮೃತಪಟ್ಟವರ ಸಂಖ್ಯೆ ಮರೆಮಾಚಿ ಸುಳ್ಳು ಮಾಹಿತಿ ಕೊಡಿಸುತ್ತಿದೆ

ಮಧುಗಿರಿ : ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಹಾಗಾಗಿ ಮೃತಪಟ್ಟವರ ಸಂಖ್ಯೆಯನ್ನು ಮರೆ ಮಾಚಿ ಅಧಿಕಾರಿಗಳ ಮೂಲಕ ಸುಳ್ಳು ಮಾಹಿತಿ ಕೊಡಿಸುತ್ತಿದೆ.  ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ದ ಹರಿಹಾಯ್ದರು.

ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಶಿತ ನೀರು ಕಡಿದು ಮೃತಪಟ್ಟ ಕುಟುಂಬಗಳ ಮನೆಗಳಗೆ ಬೇಟಿ ನೀಡಿ ಮಾಹಿತಿ ಪಡೆದು ಮಾತನಾಡಿದ ಅವರು,ನಾವು ಯಾವ ಯುಗದಲ್ಲಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಐಟಿ, ಬಿಟಿ ಯುಗದಲ್ಲಿರುವ ಇಂದಿನ ದಿನಗಳಲ್ಲಿ ಇಂದಿಗೂ  ಗ್ರಾಮದ ಜನರಿಗೆ ಶುದ್ದವಾದ ಕುಡಿಯುವ ನೀರು ಕೊಡದ ಪರಿಸ್ಥಿತಿಯಲ್ಲಿ ಸರ್ಕಾರ ಇದೆ.

ಗ್ರಾಮದಲ್ಲಿ 6 ಜನ ಸತ್ತಿದ್ದರೆ ಅಧಿಕಾರಿಗಳು ಮೂರು ಜನ ಮಾತ್ರ ಎಂದು ತಪ್ಪು ಮಾಹಿತಿ ನೀಡುತ್ತಿದ್ದು, 200 ಕ್ಕೂ ಹೆಚ್ಚು ಜನ ವಾಂತಿ-ಬೇದಿಯಿಂದ ಅಸ್ವಸ್ಥರಾಗಿದ್ದು,  ಗ್ರಾಮದ ಮೃತಪಟ್ಟ ಮನೆಗಳಿಗೆ ಬೇಟಿ ನೀಡಿದಾಗ ನಮಗೆ ಅವರು ಯಾವ ಉದ್ದೇಶಕ್ಕೆ ಸಹಿ ಹಾಕಿಸಿ ಕೊಂಡರು ಎಂಬ ಬಗ್ಗೆ ಮಾಹಿತಿಯನ್ನೇ ನೀಡದೇ ಅಧಿಕಾರಿಗಳು ಬಲವಂತ ದಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಮೃತ ಪಟ್ಟ ಕುಟುಂಬಗಳು ಆರೋಪಿಸಿದ್ದಾರೆ. 

ಅಧಿಕಾರಿಗಳು ಕೆಲವರು ಕುಡಿದು, ಲಿವರ್ ಹಾಳಾಗಿ, ಸತ್ತಿದ್ದಾರೆ ಎಂದು ಮಾಹಿತಿ ನೀಡುತ್ತಿದ್ದಾರೆ. ಸತ್ತವರು ಒಮ್ಮೆಯೂ ಬೀಡಿ, ಸಿಗರೇಟ್ ಸಹ ಸೇದಿಲ್ಲ ಇನ್ನು ಕಡಿಯುವ ಮಾತೆಲ್ಲಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಲವಂತದಿಂದ ಸಾವನ್ನು ಮುಚ್ವಿಡುತ್ತಿದೆ ಎಂದು ಆರೋಪಿಸಿದ ಅವರು ಮೃತಪಟ್ಟ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ಇದರ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ  ಎಂದರು. 

ಗ್ರಾಮದಲ್ಲಿ ವಾಂತಿ-ಬೇದಿ ಯಿಂದ ಮೃತಪಟ್ಟ ನಿಂಗಮ್ಮ(65)ಮನೆಗೆ ಆರ್. ಅಶೋಕ್  ಬೇಟಿ ನೀಡಿ ಘಟನೆಯ ಬಗ್ಗೆ ಕುಟುಂಬದವರ ಬಳಿ ಮಾಹಿತಿ ಪಡೆದರು. ಬೆಟ್ಟದ  ಮೇಲೆ ಹೋಗಿ ನೀರು ತಂದು  ಮಾಡಿದ ತಂಬಿಟ್ಟು  ಸೇವಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಈ ರೀತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಇದು ನಿಜವಾ ಎಂಬುದಾಗಿ ಕುಟುಂಬದವರ ಬಳಿ ಮಾಹಿತಿ ಕೇಳಿದಾಗ,  ನಾವ್ಯಾರೂ ತಂಬಿಟ್ಟನ್ನೇ  ಸೇವಿಸಿಲ್ಲ ಎಂದು ಮನೆಯವರು ಮಾಹಿತಿ ನೀಡಿದರು. ಇದಕ್ಕೆ ಸಿಡಿಮಿಡಿಗೊಂಡ ಆರ್. ಅಶೋಕ್  ಕೇಳಿಸಿಕೊಂಡ್ರೇನ್ರಿ... ಅಧಿಕಾರಿಗಳೇ ಇದಕ್ಕೆ ಏನು ಉತ್ತರ ಹೇಳುತ್ತೀರಿ ಬನ್ನಿ ಇಲ್ಲಿ ಇದಕ್ಕೆ ಉತ್ತರ ನೀಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ವಾಂತಿ-ಬೇದಿಯಿಂದ  ಮೃತ ಪಟ್ಟ ಗ್ರಾಮದ ನಾಗಪ್ಪ, ಹನುಮಕ್ಕ, ನರಸಮ್ಮ ಮನೆಗೂ ಬೇಟಿ ನೀಡಿ ಮಾಹಿತಿ ಪಡೆದರು. 

ಇಂತಹ ಪ್ರಕರಣಗಳು ಸಂಭವಿಸಿದಾಗ ಕೆಳ ಹಂತದ ಅಧಿಕಾರಿಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಆರೋಪಗಳಿದ್ದು, ಸಿಎಂ ತವರು ಕ್ಷೇತ್ರ ವರುಣಾದಲ್ಲಿ ಈ ಹಿಂದೆ ಈ ರೀತಿಯ ಘಟನೆ ನಡೆದಾಗ ಕೆಳ ಹಂತದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದರು.  ಈಗ ಅವರೇ ಹೇಳಿದಂತೆ ಸಿಎಂ ಸಿದ್ದರಾಮಯ್ಯನವರು ಈಗ ಯಾರ ತಲೆದಂಡ ಮಾಡ್ತಾರೆ ನೋಡೋಣ ಎಂದರು.