ತುಮಕೂರು: ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಸಾವಿನ ದುಃಖ ಸಹಿಸಲಾಗದ ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ನಡೆದಿದೆ.
ತಿಪಟೂರಿನ ರೈಲ್ವೇ ನಿಲ್ದಾಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾರಾಣಿ(26) ಮೂರು ದಿನಗಳ ಹಿಂದೆ ಕರ್ತವ್ಯ ಮುಗಿಸಿ ತೆರಳುವ ವೇಳೆ ಚಿಂದೇನಹಳ್ಳಿ ಗಡಿ ಬಳಿ ಬೈಕ್‌ನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಮೃತಪಟ್ಟಿದ್ದರು.
ಪತ್ನಿಯ ಸಾವಿನ ದುಃಖವನ್ನು ಸಹಿಸಲಾಗದ ಪತಿ ಚಂದನ್ ಕೂಡಾ ಶುಕ್ರವಾರ ನೇಣಿಗೆ ಶರಣಾಗುವ ಮೂಲಕ ಪತ್ನಿಯ ಸಾವಿನಲ್ಲಿ ಒಂದಾಗಿದ್ದಾರೆ.
ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಗಡಿ ಸಮೀಪದ ನಾರಮ್ಮನಹಳ್ಳಿಯ ಸುಧಾರಾಣಿ, ವಿದ್ಯಾಭ್ಯಾಸದ ನಂತರ ರೈಲ್ವೇ ಪೊಲೀಸ್ ಸೇವೆಗೆ ಆಯ್ಕೆಯಾಗಿ ಪ್ರಸ್ತುತ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪಕ್ಕದ ಗ್ರಾಮ ಕೆಂಕೆರೆಯ, ಪ್ರಸ್ತುತ ಅಸ್ಸಾಂ ರೆಜಿಮೆಂಟಿನಲ್ಲಿ ಯೋಧನಾಗಿರುವ ಚಂದನ್, ಸುಧಾರಾಣಿ ಪ್ರೀತಿಸಿ ಮದುವೆಯಾಗಿದ್ದರು. ಚಂದನ್ 11 ವರ್ಷಗಳ ನಂತರ ಕೆಂಕೆರೆ ಬೆಂಕಿ ಬೊಮ್ಮಪ್ಪನ ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು.