ಜಿಲ್ಲೆ

ನಾಗರಿಕರ ರಕ್ಷಣೆಗಾಗಿ 3000 ಸ್ವಯಂ ಸೇವಕರ ನೇಮಕ

ತುಮಕೂರು: ರಾಷ್ಟ್ರದ ಗಡಿಯಲ್ಲಿ ಭಾರತ-&ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸಲು ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ 3000 ಸ್ವಯಂ ಸೇವಕರ ನೇಮಕಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಯುದ್ಧಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭಗಳು ಘೋಷಣೆಯಾದಾಗ ಜನರ ಜೀವ ಹಾಗೂ ಆಸ್ತಿಗಳ ರಕ್ಷಣೆಗಾಗಿ ಸ್ವಯಂ ಸೇವಕರ ನೆರವು ಪಡೆಯಲು ಉದ್ದೇಶಿಸಿದೆ.

ಸ್ವಯಂ ಸೇವಕರ ನೇಮಕಾತಿಗಾಗಿ ಕಮ್ಯಾಂಡೆಂಟ್​ ಹೋಮ್​ಗಾರ್ಡ್​, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು, ನೆಹರು ಯುವ ಕೇಂದ್ರದ ಯುವ ಸಂಯೋಜನಾಧಿಕಾರಿಯನ್ನು ನೇಮಿಸಲಾಗಿದೆ.

ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಬಯಸುವವರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಬಗ್ಗೆ ಈಗಾಗಲೇ ಸ್ಥಳಿಯ ಆಡಳಿತ ವ್ಯಾಪ್ತಿಯಲ್ಲಿ ಪ್ರಚಾರರ ಪಡಿಸಲಾಗಿದ್ದು ಸ್ವಯಂ ಸೇವಕರಾಗಿ ಆಯ್ಕೆಯಾದವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಗುರುತಿಸಿರುವ 20 ಸೂಕ್ಷ್ಮ ಪ್ರದೇಶಗಳಿಗೆ ಬಿಎಸ್​ಎನ್​ಎಲ್​ ವತಿಯಿಂದ ಹಾಟ್​ ಲೈನ್​ ಸಂಪರ್ಕ ನೀಡಲಾಗುವುದು. ಇದರಿಂದ ಸ್ಥಳಿಯ ಸಮಸ್ಯೆಗಳನ್ನು ತ್ವರಿತವಾಗಿ ಜಿಲ್ಲಾಡಳಿತಕ್ಕೆ ತಲುಪಿಸಲು ಅನುಕೂಲವಾಗಲಿದೆ. ಅಲ್ಲದೆ, ನಗರ ಸ್ಥಳಿಯ ಸಂಸ್ಥೆ ಹಾಗೂ ತಾಲೂಕು ಕಚೇರಿಗಳಲ್ಲಿಯೂ ಸಹಾಯವಾಣಿ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸ್ಮಾರ್ಟ್​ ಸಿಟಿಯ ಇಂಟಿಗ್ರೇಟೆಡ್​ ಕಮ್ಯಾಂಡ್​ ಅಂಡ್​ ಕಂಟ್ರೋಲ್​ ಕೇಂದ್ರದಲ್ಲಿ ಸಹಾಯವಾಣಿ 0816- 2213400 ಸ್ಥಾಪಿಸಲಾಗಿದೆ. ಕಂದಾಯ, ಪೊಲೀಸ್​, ಬೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳು ಉಪಸ್ಥಿತರಿದ್ದು, ಸ್ವೀಕೃತ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಪರಿಹಾರ ನೀಡಲಿದ್ದಾರೆ. ಯುದ್ಧ ದಾಳಿ ಸಂಭವಿಸಿದಾಗ ಎಚ್ಚರಿಕೆ ಸದ್ದು ನೀಡಲು ಎಲ್ಲಾ ತಾಲೂಕು ಕಚೇರಿಗಳಲ್ಲಿ ಸೈರನ್​ ಅಳವಡಿಸಲಾಗುವುದು ಎಂದರು.

ಶಾಪಿಂಗ್​ ಮಾಲ್​, ಬಸ್​ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಶ್ವಾನದಳ, ಪೊಲೀಸ್​ ಸಿಬ್ಬಂದಿಗಳಿಂದ ತಪಾಸಣೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಎಚ್ಚರಿಕೆವಹಿಸಲಾಗಿದೆ. ಜಿಲ್ಲೆಯಲ್ಲಿ 250 ನಾಕಾಬಂದಿ ಬಿಂದು ಗುರುತಿಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದರೆ ಅದನ್ನು ಮುಟ್ಟದೆ ಸಹಾಯ ವಾಣಿ112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಯುದ್ಧದ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅನುಮತಿ ನೀಡಲಾಗುವುದಿಲ್ಲ. ಹೆಚ್ಚಿನ ಜನ ಸೇರುವ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಮದುವೆ, ಮತ್ತಿತರ ಶುಭ ಸಮಾರಂಭಗಳಿಗೆ ಕಡಿಮೆ ಜನರು ಮಾತ್ರ ಸೇರಲು ಅವಕಾಶ ನೀಡಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಯಾವುದೇ ತಪ್ಪು ಸಂದೇಶಗಳು ವಾಟ್ಸ್​ಪ್​ ಮೂಲಕ ಹಂಚಿಕೊಂಡರೆ ಗ್ರೂಪ್​ ಅಡ್ಮಿನ್​ ನೇರ ಹೊಣೆ. ಕೆ.ವಿ.ಅಶೋಕ್​ ಜಿಲ್ಲಾ ಪೊಲೀಸ್​ ಅಧೀಕ್ಷಕ
ವಿಪತ್ತು ನಿರ್ವಹಣೆಗೆ ಸಹಾಯವಾಣಿ: ರಾಜ್ಯದ ನಾಗರಿಕ ರಕ್ಷಣಾ ಕಾರ್ಯ ಚಟುವಟಿಕೆಗಳ ಪರಾಮರ್ಶೆ ಹಿನ್ನೆಲೆಯಲ್ಲಿ ತುಮಕೂರು ತಾಲೂಕಿನಲ್ಲಿ ವಿಪತ್ತು ನಿರ್ವಹಣೆ ಮತ್ತು ಮುಂಜಾಗ್ರತೆಗಾಗಿ ತುಮಕೂರು ತಾಲೂಕು ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಸಲಹೆ, ದೂರು, ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ 0816- 2278496 ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು.