ತುಮಕೂರು: ಕೊಬ್ಬರಿ ಬೆಲೆ ಸತತ ಏರಿಕೆ ನಾಗಾಲೋಟ ಮುಂದುವರಿದಿದ್ದು ತಿಪಟೂರು ಮಾರುಕಟ್ಟೆಯಲ್ಲಿ ಗುರುವಾರ ಕ್ವಿಂಟಾಲ್ ಕೊಬ್ಬರಿ ಬರೋಬ್ಬರಿ 24129ರೂ. ಗೆ ಮಾರಾಟವಾಗುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಿತು.
ಮೇ.12ರಂದು 18244ರೂ.ಗೆ, ಮೇ.26ರಂದು 21809ರೂ.ಗೆ ತಲುಪಿದ್ದ ಕೊಬ್ಬರಿ ಯಾರೂ ನಿರೀಸದ ರೀತಿಯಲ್ಲಿ ಬೆಲೆ ಏರಿಕೆ ಕಾಣುತ್ತಿರುವುದು ತೆಂಗಿನ ಸೀಮೆಯ ಜನರಿಗೆ ಸೋಜಿಗ ಎನ್ನಿಸಿದೆ. ವಿಪರ್ಯಾಸ ಎಂಬಂತೆ ತುಮಕೂರು ಜಿಲ್ಲೆಯಲ್ಲಿ ತೆಂಗು ಇಳುವರಿ ಗಣನೀಯವಾಗಿ ಕಡಿಮೆಯಾಗಿರುವುದು ಕೈಗೆ ಬಂದಿರುವ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.
ಗುರುವಾರ ಮಾರುಕಟ್ಟೆಗೆ 3028 ಕ್ವಿಂಟಾಲ್ ಕೊಬ್ಬರಿ ಬಂದಿದ್ದು ಸರಾಸರಿ 23850ರೂ. ನಂತೆ ಮಾರಾಟವಾಗಿದೆ, ಕನಿಷ್ಟ ದರ 21000, ಗರಿಷ್ಟ 24129ರೂ. ದಾಖಲಾಗಿರುವುದು ತೆಂಗು ಸೀಮೆಯಲ್ಲಿಯೇ ಅಚ್ಚರಿಗೆ ಕಾರಣವಾಗಿದೆ. ಕಳೆದೊಂದು ತಿಂಗಳಿನಿಂದಲೂ ಕೊಬ್ಬರಿ ಬೆಲೆ ಸತತವಾಗಿ ಏರಿಕೆ ಕಾಣುತ್ತಿದ್ದು 25 ಸಾವಿರ ರೂ. ದಾಟಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ದಲ್ಲಾಳಿಗಳು.
ತೋಟಗಾರಿಕೆ ಇಲಾಖೆಯ ಸಮೀೆಯಂತೆಯೇ ಒಂದು ಕ್ವಿಂಟಾಲ್ ಕೊಬ್ಬರಿ ಉತ್ಪಾದಿಸಲು ರೈತರಿಗೆ 18500ರೂ. ಖರ್ಚು ಬರುತ್ತಿದ್ದು ಇಷ್ಟು ದರವನ್ನು ರೈತ ಹಿಂದೆಂದೂ ಪಡೆದೇ ಇರಲಿಲ್ಲ. ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಕೂಡ 12100ರೂ. ಮಾತ್ರವಿದ್ದು ಪ್ರಸ್ತುತ ಮಾರುಕಟ್ಟೆಯಲ್ಲಿಯೇ ಇದರ ಡಬಲ್ ರೇಟ್ ಸಿಗಲಾರಂಭಿಸಿದೆ.
ಶ್ರಾವಣದಲ್ಲಿ ಹಬ್ಬಗಳು ಬರಲಿದ್ದು ಈ ಆಷಾಡ ಕಳೆದರೆ ಉತ್ತರ ಭಾರತದಲ್ಲಿ ರುಚಿಗೆ ಖ್ಯಾತಿಗಳಿಸಿರುವ ತಿಪಟೂರು ಭಾಗದ ಉಂಡೆ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಲಿದೆ. ಜತೆಗೆ ಪೂರೈಕೆ ಕೂಡ ಕಡಿಮೆಯಾಗಿರುವುದು ಬೆಲೆ ಮತ್ತಷ್ಟು ದಿನ ಸ್ಥಿರವಾಗಿರಲಿದೆ ಎಂದು ವಿಶ್ವಾಸ ರೈತರಲ್ಲಿದೆ.
ತಿಪಟೂರು ಕೊಬ್ಬರಿ ಧಾರಣೆ: ಕನಿಷ್ಟ: 21000 ಗರಿಷ್ಟ: 24129 ಮಾದರಿ: 23850 ಅವಕ: 3028 ಕ್ವಿಂಟಾಲ್