ಜಿಲ್ಲೆ

ತುಮಕೂರು ಜಿಲ್ಲೆಯಲ್ಲಿ 14 ಕೋವಿಡ್​ ಪ್ರಕರಣ; ಒಂದು ಸಾವು

ತುಮಕೂರು: ಜಿಲ್ಲೆಯಲ್ಲಿಯೂ ಕರೊನಾ ಪ್ರಕರಣ ದಾಖಲಿಸಿಕೊಂಡಿದ್ದು ತುರುವೇಕೆರೆ ತಾಲೂಕಿನ 42 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಸಾವನ್ನಪ್ಪಿರುವ ಪ್ರಕರಣ ಸೋಮವಾರ ವರದಿಯಾಗಿದೆ.

ಕರೊನಾದಿಂದ ಮೃತಪಟ್ಟ ವ್ಯಕ್ತಿಯು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೂ.2ರಂದು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಖಚಿತಪಡಿಸಿದರು.

ಜಿಲ್ಲೆಯಲ್ಲಿ ಐಎಲ್​ಐ ಹಾಗೂ ಸಾರಿ ಪ್ರಕರಣಗಳಿಂದ 36 ಗಂಟಲು ದ್ರವ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಗುಬ್ಬಿ ತಾಲೂಕಿನ 13 ಹಾಗೂ ಶಿರಾ ತಾಲೂಕಿನ 1 ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಕರೊನಾ ಪಾಸಿಟೀವ್​ ದೃಢಪಟ್ಟ ಬಗ್ಗೆ ವರದಿ ಬಂದಿದೆ. ಕರೊನಾ ಪಾಸಿಟಿವ್​ ಕಂಡು ಬಂದವರ ಪ್ರೆೃಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್​ನಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ.

ಆರೋಗ್ಯ ಸಚಿವಾಲಯದ ಕರೊನಾ ಮಾರ್ಗಸೂಚಿಗಳನ್ವಯ ಐಎಲ್​ಐ ಮತ್ತು ಸಾರಿ ಪ್ರಕರಣ ಪರೀಕ್ಷೆಗೊಳಪಡಿಸಲು ನಿರ್ದೇಶನ ನೀಡಿದ್ದು, ಅದರನುಸಾರ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್​ ಪರೀಕ್ಷೆ ಮಾಡಲು ಹಾಗೂ ಕೋವಿಡ್​ ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧ ತಪಾಸಣಾ ಕಿಟ್​ಗಳನ್ನು ಪೂರೈಕೆ ಮಾಡಲಾಗಿದೆ.

ಕರೊನಾ ಪಾಸಿಟೀವ್​ ದೃಢಪಟ್ಟ ರೋಗಿಗಳ ಗುಣಲಕ್ಷಣಕ್ಕೆ ತಕ್ಕಂತೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಗಂಭೀರ ಪರಿಸ್ಥಿತಿ ಇರುವುದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಹೆಚ್ಚಿನ ಜನಸಂದಣಿ ಇರುವೆಡೆ ಸೇರಬಾರದು. ಗರ್ಭಿಣಿ ಮಹಿಳೆಯರು ಹಾಗೂ ರಕ್ತದೊತ್ತಡ, ಮಧುಮೇಹ, ಕಿಡ್ನಿ ಸಂಬಂಧ (ಕೋಮಾರ್ಬಿಡಿಟಿ)ರೋಗಿಗಳು, ವಯೋವೃದ್ಧರು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಜ್ವರ, ಕೆಮ್ಮು, ನೆಗಡಿ, ತಲೆನೋವು, ಎದೆನೋವು ಅಥವಾ ಉಸಿರಾಟದ ತೊಂದರೆ ರೋಗಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯಕಿಯ ಸಲಹೆ ಪಡೆಯಬೇಕು.

ಕರೊನಾ ಹರಡದಂತೆ ನಿಯಂತ್ರಿಸಲು ಜಿಲ್ಲಾ ಹಂತದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕೋವಿಡ್​ ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ 2000 ಹಾಸಿಗೆ, 200 ಐಸಿಯು ಹಾಸಿಗೆ, ಸುಸ್ಥಿತಿಯಲ್ಲಿರುವ 55 ವೆಂಟೆಲೇಟರ್ಸ್​, 257 ಆಕ್ಸಿಜನ್​ ಕಾನ್ಸಂಟ್ರೇಟರ್​, 14 ಆಕ್ಸಿಜನ್​ ಪ್ರೊಡ್ಯೂಸಿಂಗ್​ ಪ್ಲಾಂಟ್​ಗಳಿವೆಯಲ್ಲದೆ ವೈದ್ಯಕಿಯ ಕಾಲೇಜು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 2000 ಹಾಸಿಗೆ ಹಾಗೂ 200 ಐಸಿಯು ಹಾಸಿಗೆಗಳು ಲಭ್ಯವಿದೆ.

ಕರೊನಾ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ದಿನ 400 ಆರ್​ಟಿಪಿಸಿಆರ್​ ಟೆಸ್ಟ್​ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ಅಗತ್ಯ ಎಂದು ತಿಳಿಸಿದರಲ್ಲದೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಅನಾರೋಗ್ಯ ಪೀಡಿತ ಮಕ್ಕಳನ್ನು ಮನೆಯಲ್ಲಿಯೇ ಇರಿಸಬೇಕು. ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ, ರೋಗಲಕ್ಷಣಗಳಿದ್ದವರ ಬಗ್ಗೆ ಆರೋಗ್ಯ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಮಾಹಿತಿಯನ್ನು ಹಂಚಿಕೊಳ್ಳಬೇಕು.

ಜಿಲ್ಲೆಯಲ್ಲಿ ಜನವರಿ 2025 ರಿಂದ ಮೇ 2025ರವರೆಗೆ ಯಾವುದೇ ಕೋವಿಡ್​-19 ಪ್ರಕರಣಗಳು ವರದಿಯಾಗಿರುವುದಿಲ್ಲ. ಜೂನ್​ ಮಾಹೆಯಲ್ಲಿ ಜಿಲ್ಲಾದ್ಯಂತ ಶಂಕಿತ ಕೋವಿಡ್​-19ರ ರೋಗಿಗಳಿಂದ ಪರೀಕ್ಷೆಗಾಗಿ ಒಟ್ಟು 36 ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಜೂ.2ರಂದು ಬೆಂಗಳೂರಿನ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷಿಸಿದ ಮಾದರಿಗಳಲ್ಲಿ 14 ಪ್ರಕರಣಗಳು ಕೋವಿಡ್​-19 ಪಾಸಿಟಿವ್​ ಇರುವುದು ದೃಢಪಟ್ಟಿದೆ. ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ (ಣಡಿಚಿರಜ) ಎಲ್ಲಾ 14 ಪಾಸಿಟಿವ್​ ಪ್ರಕರಣಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆದು ಆರೋಗ್ಯದಿಂದ ಮನೆಯಲ್ಲಿದ್ದಾರೆ ಎಂದು ಡಿಎಚ್ಒ ಡಾ.ಚಂದ್ರಶೇಖರ್​ ಮಾಹಿತಿ ನೀಡಿದ್ದಾರೆ.