ಜಿಲ್ಲೆ

ಅಳಿವಿನ ಅಂಚಿನಲ್ಲಿ ತುಳುವೇಶ್ವರ ದೇವಳ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಆರು ಕಿಲೋ ಮೀಟರ್ ದೂರದಲ್ಲಿರುವ ಬಸ್ರೂರಿನಲ್ಲಿ ತುಳುವರ ಆರಾಧ್ಯ ದೈವ ಪಂಜುರ್ಲಿ ದೈವದ ಸಂಕೇತವಾದ ಸುಮಾರು 500 ವರ್ಷಗಳ ಪುರಾತನ ತುಳುವೇಶ್ವರ ದೇವಾಲಯ ವಿನಾಶದ ಅಂಚಿನಲ್ಲಿದೆ.

ಜಗತ್ತಿನ ಏಕೈಕ ತುಳುವೇಶ್ವರ ದೇವಸ್ಥಾನ ವಾರಾಹಿ ನದಿ ತೀರದಲ್ಲಿದ್ದು, ಶತಮಾನಗಳ ಇತಿಹಾಸ ಹೊಂದಿದೆ. ತುಳುನಾಡು ಎಂದು ಕರೆಯಲ್ಪಡುವ ಕಾಸರಗೋಡಿನಿಂದ ಬೈಂದೂರುವರೆಗಿನ ಕಡಲ ಕಿನಾರೆ ಪ್ರದೇಶದ ತುಳು ಭಾಷಿಗರಿಗೆ ಬಸ್ರೂರಿನಲ್ಲಿರುವ ತುಳುವೇಶ್ವರ ದೇವಾಲಯವೇ ಅಧಿದೇವತೆ.

ಬಸ್ರೂರಿನ ಆಲದ ಮರದ ಪೊಟರೆಯೊಳಗೆ ತುಳುವೇಶ್ವರ ಪ್ರತಿಷ್ಠಾಪನೆಯಾಗಿದ್ದು, ಬೇರುಗಳ ದಟ್ಟ ಪರದೆ ಮೂಲಕ ಮುಖ್ಯಲಿಂಗ ಇಣುಕಿ ನೋಡಬೇಕಿದೆ. ಮಾನವ ನಿರ್ಮಿತವಲ್ಲದ ಈ ದೇವಾಲಯದ ಗೋಡೆಯ ಬಳಿ ಬೆಳೆದ ಆಲದ ಮರವು ಶಿವಲಿಂಗದ ಸುತ್ತ ಆವರಿಸಿದೆ.

ತುಳುವೇಶ್ವರ ಇತಿಹಾಸ ಕಾಲದಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದ ದೇವ ಸನ್ನಿಧಾನವಾಗಿತ್ತು ಎನ್ನಲು ಶಾಸನಾಧಾರಗಳೂ ಇವೆ. ಕ್ರಿಶ 1041ರಂದು ಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರನಿಗೆ ದಾನ ಕೊಟ್ಟಿರುವುದು ದಾಖಲಾಗಿದೆ.

ಬಸ್ರೂರು ಶಿವನ ನೆಲೆಯಾಗಿತ್ತು ಎಂಬುದಕ್ಕೆ ಶಿವನ ಎದುರಿರುವ ನಂದಿ ವಿಗ್ರಹವೇ ಸಾಕ್ಷಿ. ಮುರಕಲ್ಲಿನಲ್ಲಿ ಕಟ್ಟಿರುವ ಗೋಡೆ, ನಂದಿ ಮಂಟಪದ ಕುರುಹುಗಳು, ನೈವೇದ್ಯ ಶಾಲೆ, ಅವಶೇಷಗಳು ಹೀಗೆ ಮತ್ತಷ್ಟು ಪ್ರಾಚೀನ ದಾಖಲೆಗಳಿವೆ. ನಂದಿ ವಿಗ್ರಹವು ಅಪರೂಪದ ಕೆತ್ತನೆಯಿಂದ ಕೂಡಿದ್ದು, ಏಕಶಿಲಾ ವಿಗ್ರಹವಾಗಿದೆ. ಸುಮಾರು 60 ವರ್ಷಗಳ ಹಿಂದೆ ನಿಧಿಯಾಸೆಗೆ ನಂದಿಯ ವಿಗ್ರಹವನ್ನು ಕಬ್ಬಿಣದ ಸಲಾಕೆಯಿಂದ ಪೀಠದಿಂದ ಬೇರ್ಪಡಿಸಲು ಪ್ರಯತ್ನವಾಗಿತ್ತು. ಆದರೆ ನಂದಿಯ ವಿಗ್ರಹ ಬೇರ್ಪಡಿಸುವ ಪ್ರಯತ್ನ ವಿಫಲವಾಯಿತು. ಅಂದಿನಿಂದಲೂ ನಂದಿಯ ಒಂದು ಭಾಗ ವಾಲಿಕೊಂಡಂತೆ ಮತ್ತು ಮೇಲಕ್ಕೆ ಎದ್ದಿರುವ ಭಂಗಿಯಲ್ಲಿ ಇದೆ. ಸುಮಾರು 150 ವರ್ಷಗಳ ಹಿಂದೆ ವಿಠಲ ಕಿಣಿ ಎಂಬುವ ವೈಷ್ಣವ ಸಂಪ್ರದಾಯಸ್ಥ ಮನೆತನದ ವ್ಯಕ್ತಿ ಶಿವಲಿಂಗವಿದ್ದ ಈ ಭೂಮಿ ಖರೀದಿಸಿದ್ದು, ಶಿವಲಿಂಗವಿರುವ ವಿಚಾರ ಅವರಿಗೆ ತಿಳಿದಿರಲಿಲ್ಲ. ಶಿವನ ಕಾರಣಿಕ ಶಕ್ತಿ ಗೋಚರವಾದಲ್ಲಿಂದ ಇಂದಿನವರೆಗೆ ವಿಠಲ ಕಿಣಿ ಮನೆಯವರೇ ತುಳುವೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ತುಳುವೇಶ್ವರ ದೇವಾಲಯದ ಜೀರ್ಣೋದ್ಧಾರ ನಡೆಸಲು ತುಳುವರ್ಲ್ಡ್ ಫೌಂಡೇಶನ್ ಮುಂದಾಗಿದ್ದು, ಈ ಕಾರಣಕ್ಕಾಗಿ ತಾಂಬೂಲ ಪ್ರಶ್ನಾ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದೆ. ಬಸ್ರೂರು ಅಪ್ಪಣ್ಣ ಹೆಗ್ಡೆ ಮಾರ್ಗದರ್ಶನದಲ್ಲಿ ತುಳುವೇಶ್ವರ ದೇವಸ್ಥಾನ ಅರ್ಚಕ ಮಹೇಶ್ ಕಿಣಿ ಸಂಚಾಲಕತ್ವದಲ್ಲಿ, ಜ್ಯೋತಿಷಿ ತಿಲಕಂ ಶಶಿಧರ ಮಾಂಗಡ್ ನೇತೃತ್ವದಲ್ಲಿ ಪ್ರಶ್ನೆ ಚಿಂತನೆ ನಡೆಯಲಿದೆ.

ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವುಳ್ಳ ತುಳುನಾಡಿನ ಆರಾಧ್ಯ ದೇವ ತುಳುವೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು, ಜೀಣೋದ್ಧಾರ ಮಾಡಲು ತುಳುವರ್ಲ್ಡ ಫೌಂಡೇಶನ್ ಮುಂದಾಗಿದೆ. ಜಗತ್ತಿನ ಏಕೈಕ ತುಳುವೇಶ್ವರ ದೇವಸ್ಥಾನದ ಇದಾಗಿದ್ದು. ಸರ್ವರ ಸಹಕಾರ ಅಗತ್ಯವಿದೆ. -ಸರ್ವೋತ್ತಮ ಶೆಟ್ಟಿ ತುಳುವೇಶ್ವರ ದೇವಾಲಯ ಅಧ್ಯಕ್ಷ ತುಳುವೇಶ್ವರ ದೇವಾಲಯದ ಹಿನ್ನಲೆ ಜಗತ್ತಿಗೆ ತಿಳಿಸಬೇಕಾದುದು ನಮ್ಮ ಕರ್ತವ್ಯ. ತುಳುನಾಡಿನ ಈ ದೇವಾಲಯವು ಪ್ರಪಂಚಕ್ಕೆ ಪ್ರಸಿದ್ಧಿಯಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಅಗಮಿಸಬೇಕೆನ್ನುವ ಆಶಯದೊಂದಿಗೆ ದೇವಸ್ಥಾನದ ಜೀಣೋದ್ಧಾರ ಕಾರ್ಯ ನಡೆಸಲು ಚಿಂತಿಸಲಾಗಿದೆ. -ಡಾ.ರಾಜೇಶ ಆಳ್ವ ನಿರ್ದೇಶಕ, ತುಳುವರ್ಲ್ಡ್ ಫೌಂಡೇಶನ್ ಕಟೀಲು

ಪಾಯಿಂಟ್ಸ್

*ಬಸ್ರೂರಿನಲ್ಲಿರುವ ತುಳುವರ ಆರಾಧ್ಯ ದೈವದ ಕ್ಷೇತ್ರ

*ಪೊಟರೆಯೊಳಗೆ ಪ್ರತಿಷ್ಠಾಪನೆಯಾದ ತುಳುವೇಶ್ವರ

*ಮಾನವ ನಿರ್ಮಾಣವಲ್ಲದ ದೇಗುಲ