ಜಿಲ್ಲೆ

ಡಿ.೨೩ ರಿಂದ ತುಳುವೆರ ಕ್ರಿಕೆಟ್ ಪ್ರೀಮಿಯರ್ ಲೀಗ್

ಮಡಿಕೇರಿ: ಕೊಡಗು ತುಳುವೆರ ಯುವ ಸಮಿತಿ ವತಿಯಿಂದ ಡಿ.೨೩ ರಿಂದ ೨೫ರವರೆಗೆ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ’ಕೊಡಗು ತುಳುವೆರ ಕ್ರಿಕೆಟ್ ಪ್ರೀಮಿಯರ್ ಲೀಗ್’ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ವಿವೇಕ್ ಮೊಗೇರ ತಿಳಿಸಿದರು.


ಜಿಲ್ಲೆಯಲ್ಲಿ ಬಂಟ, ಬಿಲ್ಲಾವ, ಮೊಗೇರ, ಆದಿ ದ್ರಾವಿಡ, ಕುಲಾಲ, ಪರಿವಾರ ಬಂಟ, ವಿಶ್ವ ಕರ್ಮ, ಮುರಾಠ/ಮರಾಠಿ(ನಾಯ್ಕ), ತುಳುವ ಬ್ರಾಹ್ಮಣ, ಪದಾರ್ಥಿ, ಗಾನಿಗ ಸಮುದಾಯ ಸೇರಿ ಸುಮಾರು ೧,೫೦,೦೦೦ ತುಳು ಜನಾಂಗ ನೆಲೆಸಿದೆ. ಇವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮತ್ತು ಯುವ ಜನಾಂಗವನ್ನು ಸಂಘಟಿಸುವ ಸಲುವಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪುರುಷರಿಗೆ ಹಗ್ಗಜಗ್ಗಾಟ ಮತ್ತು ಮಹಿಳೆಯರಿಗೆ ಥ್ರೋಬಾಲ್ ಡಿ೨೪ ಮತ್ತು ೨೫ ರಂದು ನಡೆಯಲಿದೆ. ಡಿ೨೩ ರಂದು ತುಳುನಾಡಿನ ವೇಷಭೂಷಣ, ನೃತ್ಯ, ವಾದ್ಯದೊಂದಿಗೆ ನಗರದ ಗಾಂಧಿ ಮೈದಾನದಿಂದ ಕ್ರೀಡಾಕೂಟದ ಮೈದಾನಕ್ಕೆ ಮೆರವಣಿಗೆ ನಡೆಯಲಿದೆ. ಕ್ರೀಡಾಕೂಟದಲ್ಲಿ ಅರವಿಂದ್ ಬೊಲಾರ್, ಸ್ಯಾಂಡಲ್‌ವುಡ್‌ನ ನಟರಾದ ರಕ್ಷಿತ್ ಶೆಟ್ಟಿ, ರಾಜು.ಬಿ.ಶೆಟ್ಟಿ, ರಿಶಬ್ ಶೆಟ್ಟಿ, ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಎಸ್.ಅಂಗಾರ, ಸಂಸದ ಪ್ರತಾಪ್ ಸಿಂಹ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.


ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ದೀಪಕ್ ರೈ, ಸದಸ್ಯರಾದ ಕೇಶವ್ ಶೆಟ್ಟಿ, ದಿವ್ಯ ಪೂಜಾರಿ, ಕೀರ್ತನಾ ರೈ ಇದ್ದರು.