ಮಂಗಳೂರು : ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ತುಳು ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿರುವ ಅಕಾಡೆಮಿಡ್ ಒಂಜಿ ದಿನ -ಬಲೆ ತುಳು ಓದುಗ ಅಭಿಯಾನ ಅತ್ಯಂತ ಸೂಕ್ತವಾಗಿದೆ. ತುಳು ಬದುಕಿನ ನಂಬಿಕೆಯ ಜತೆಗೆ
ಜಿಜ್ಞಾಸೆಯನ್ನು ಸಮಚಿತ್ತದಿಂದ ಕಾಣುವ ಪ್ರಜ್ಞಾವಂತಿಕೆ ಓದಿನ ಮೂಲಕ ಮೂಡಲಿದೆ ಎಂದು ಹಿರಿಯ ತುಳು ಸಾಹಿತಿ ಪರಮಾನಂದ ಸಾಲ್ಯಾನ್ ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕೂಳೂರಿನ ಯೆನೆಪೋಯ ಕಾಲೇಜು ಸಹಯೋಗದಲ್ಲಿ ನಡೆದ ತುಳು ಸಾಹಿತ್ಯ ಓದುಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ‘ಮದಿಪು’ ಸಂಚಿಕೆಯನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಬಿಡುಗಡೆಗೊಳಿಸಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು.
ಅಕಾಡೆಮಿಯ ಸದಸ್ಯರಾದ ನಾಗೇಶ್ ಕುಮಾರ್ ಉದ್ಯಾವರ, ರವಿರಾಜ್ ಸುವರ್ಣ ಮುಂಬೈ, ಬೂಬ ಪೂಜಾರಿ, ಯೆನೆಪೋಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಯಾಝ್.ಪಿ , ವಿದ್ಯಾರ್ಥಿ ಸಂಚಾಲಕಿ ಶ್ರದ್ಧಾ ಶೆಟ್ಟಿ ಉಪಸ್ಥಿತರಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ, ಸದಸ್ಯ ಬಾಬು ಕೊರಗ ಪಾಂಗಾಳ ವಂದಿಸಿದರು.ಸದಸ್ಯೆ ಅಕ್ಷಯ ಆರ್.ಶೆಟ್ಟಿ
ಕಾರ್ಯಕ್ರಮ ನಿರೂಪಿಸಿದರು. ಬಲೆ ತುಳು ಓದುಗ ಕಾರ್ಯಕ್ರಮದಲ್ಲಿ ಕೂಳೂರಿನ ಯೆನೆಪೋಯ ಕಾಲೇಜಿನ 50 ವಿದ್ಯಾರ್ಥಿಗಳು ದಿನಪೂರ್ತಿ ಭಾಗವಹಿಸಿ ಸಾಯಂಕಾಲ ತಾವು ಓದಿದ ಪುಸ್ತಕದ ಬಗ್ಗೆ ಅತಿಥಿಗಳೊಂದಿಗೆ ಸಂವಾದ ನಡೆಸಿದರು.