ಮಂಗಳೂರು: ತುಳು ಭಾಷೆ, ಸಂಶೋಧನೆ ಹಾಗೂ ತುಳು ಭಾಷೆಯ ಉಳಿವಿಗಾಗಿ ಸೇವೆ ಸಲ್ಲಿಸಿದವರು ದಿ. ಪಾಲ್ತಾಡಿಯವರು. ಓರ್ವ ಶಿಕ್ಷಕರಾಗಿ ಶಾಲಾ ಪಠ್ಯಕ್ರಮದಲ್ಲಿ ಮಕ್ಕಳ ಕಲಿಕೆಗಾಗಿ ತುಳುವಿನ ಸೇರ್ಪಡೆ ಪಾಲ್ತಾಡಿಯವರು ನೀಡಿರುವ ಕೊಡುಗೆ ಅನನ್ಯ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿಯವರು ಹೇಳಿದರು.
ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ಗುರುವಾರ ಜರುಗಿದ ಪಾಲ್ತಾಡಿ ರಾಮಕೃಷ್ಣ ಆಚಾರ್‌ರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.
ಪಾಲೆದ ಕೆತ್ತೆ ಎನ್ನುವ ಆಯುರ್ವೇದ ಗಿಡ ಮೂಲಿಕೆ ಔಷಧಿಯನ್ನು ಮೊದಲ್ಗೊಂಡು ಮಗುವನ್ನು ಮಲಗಿಸಲು ಬಳಸುತ್ತಿದ್ದ ಹಾಳೆ ಸಹಿತವಾಗಿ ತುಳು ನಾಡಿನ ನಂಬಿಕೆ, ಆಚರಣೆಗಳು, ಸಂಸ್ಕೃತಿ ಹಾಗೂ ಗ್ರಾಮೀಣ ಬದುಕಿನ ಜನಪದ ಒಳಮರ್ಮವನ್ನು ಅಧ್ಯಯನ ಮಾಡಿದ ಓರ್ವ ಅದ್ಭುತ ಸಾಧಕ ಶ್ರೇಷ್ಠರು ಪಾಲ್ತಾಡಿಯವರು. ತುಳು ಭಾಷಾ ಸಂಸ್ಕೃತಿಯ ಜಿಜ್ಞಾಸೆಗಳಿಗೆ ಓರ್ವ ಅಧಿಕೃತ ವಕ್ತಾರರಂತೆ ಬದುಕಿದವರು ಪಾಲ್ತಾಡಿಯವರು ಎಂದು ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ನುಡಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿನಮನ ಸಲ್ಲಿಸುತ್ತಾ, ಪಾಲ್ತಾಡಿ ರಾಮಕೃಷ್ಣ ಆಚಾರ್ಯರು ತನ್ನ ಸ್ವಂತ ಪರಿಶ್ರಮ ಹಾಗೂ ಅಧ್ಯಯನ ಶೀಲತೆಯಿಂದ ತುಳು ಭಾಷೆಯ ಬೆಳವಣಿಗೆಗಾಗಿ ಸಕಲ ವಿಧದಲ್ಲೂ ಕೊಡುಗೆ ನೀಡಿದ್ದರು ಎಂದರು.
ಸಂಗೀತ ಕಲಾವಿದರಾದ ತೋನ್ಸೆ ಪುಷ್ಕಳ್ ಕುಮಾರ್ ಪಾಲ್ತಾಡಿಯವರ ಕೃತಿಯನ್ನು ವಿಶಿಷ್ಟವಾಗಿ ಹಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು , ಸುಂದರ ಶೆಟ್ಟಿ ಬೆಟ್ಟಂಪಾಡಿ, ಡಾ. ಮಂಜುಳಾ ಶೆಟ್ಟಿ , ಕೆ. ತಾರಾನಾಥ ಹೊಳ್ಳ, ಡಿ.ಐ. ಅಬೂಬಕರ್ ಕೈರಂಗಳ, ಮುಲ್ಕಿ ಕರುಣಾಕರ ಶೆಟ್ಟಿ, ಜಿ.ಕೆ. ಭಟ್ ಸೇರಾಜೆ, ಚಂದ್ರಶೇಖರ ಶೆಟ್ಟಿ, ಅರುಣಾ ನಾಗರಾಜ್ ಮೊದಲಾದವರು ಪುಷ್ಪನಮನ ಸಲ್ಲಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.