ಜಿಲ್ಲೆ

ಮಂಗಳೂರು ವಿಶೇಷ ಕಾರ್ಯಪಡೆ ಪೊಲೀಸರಿಗೆ ತುಳು ಕಲಿಕೆ ಕಾರ್ಯಾಗಾರಕ್ಕೆ ಚಾಲನೆ

ಹರೀಶ ಎಂ.

ಮಂಗಳೂರು: ಪೊಲೀಸರು ಸ್ಥಳೀಯ ಭಾಷೆಯನ್ನು ಕಲಿಯುವುದರಿಂದ ಸಾರ್ವಜನಿಕರೊಂದಿಗೆ ವ್ಯವಹರಿಸಲು ನೆರವಾಗಲಿದೆ. ಇದರಿಂದ ಕರ್ತವ್ಯ ನಿರ್ವಹಣೆ ಸುಲಭ ಸಾಧ್ಯವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಮತ್ತು ವಿಶೇಷ ಕಾರ್ಯಪಡೆ ಡಿಐಜಿಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶೇಷ ಕಾರ್ಯಪಡೆ ಮಂಗಳೂರು (ಎಸ್‌ಎಎ್) ವತಿಯಿಂದ ವಿಶೇಷ ಕಾರ್ಯಪಡೆ ಸಿಬಂದಿಗಳಿಗಾಗಿ ಆಯೋಜಿಸಲಾಗಿರುವ 20 ದಿನಗಳ ತುಳು ಕಲಿಕಾ ಶಿಬಿರ ಮತ್ತು ಸಂಸ್ಕೃತಿ ಪರಿಚಯ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ದ.ಕ ಮತ್ತು ಉಡುಪಿ ಭಾಗದಲ್ಲಿ ಸ್ಥಳೀಯ ಭಾಷೆಗಳು ಬಳಕೆಯಾಗಿರುವುದರಿಂದ ಪೊಲೀಸರಿಗೂ ಕೆಲಸ ಮಾಡಲು ಸಮಸ್ಯೆಯಾಗುತ್ತದೆ. ನಾವು ನಮ್ಮವರು ಎನ್ನುವ ಭಾವನೆ ಬರುವುದಿಲ್ಲ. ಸ್ಥಳೀಯರು ಕೂಡಾ ನಮ್ಮವರು ಎಂದು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಭಾಷೆಯನ್ನು ಕಲಿಯುವುದರಿಂದ ಸಂಸ್ಕೃತಿಯ ಪರಿಚಯವೂ ಆಗಿ, ನಾವೂ ಅವರೊಳಗೆ ಒಬ್ಬರಾಗುತ್ತೇವೆ. ಇದು ಅಪರಾಧ ತನಿಖೆಯ ಸಂದರ್ಭದಲ್ಲೂ ಇಲಾಖೆಗೆ ನೆರವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಶೇ.98ರಷ್ಟು ಮಂದಿ ಅವರ ಪಾಡಿಗೆ ಅವರು ಇದ್ದಾರೆ. ಏನೇ ಸಮಸ್ಯೆ ಬಂದರೂ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಶೇ.2ರಲ್ಲಿ ಶೇ.1ರಷ್ಟು ಮಂದಿ ಅಪರಾಧಿಕ ಮನಸ್ಥತಿಯವರು. ಇವರು ಶೇ.98ರಷ್ಟಿರುವ ಜನರನ್ನು ಹೆದರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದ ಶೇ.1 ಪೊಲೀಸರಾಗಿದ್ದು, ಅವರು ಶೇ.98ರಷ್ಟು ಮಂದಿಗೆ ಧೈರ್ಯ ಹೇಳುವ ಕೆಲಸ ಮಾಡಬೇಕು. ಅವರಿಗೆ ಅವರದೇ ಆದ ಭಾಷೆಯಲ್ಲಿ ಹೇಳಿದರೆ ಅರ್ಥವಾಗುತ್ತದೆ. ಅವರ ನೋವು ತಿಳಿಯಬೇಕಾದರೆ ನಾವು ಅವರ ಭಾಷೆ ಕಲಿಯಬೇಕು ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಉದ್ಘಾಟಿಸಿ, ಹೊರ ಜಿಲ್ಲೆಯ ಪೊಲೀಸರು ತುಳು ಕಲಿತು ತುಳುವಿನಲ್ಲಿ ವ್ಯವಹರಿಸುವುದರಿಂದ ತುಳುವಿಗೆ ಇನ್ನಷ್ಟು ಮಾನ್ಯತೆ ಸಿಗಲಿ ಎಂದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ನೋಡಿ ಓದಿ ಭಾಷೆ ಕಲಿಯಲು ಸಾಧ್ಯವಿಲ್ಲ. ಸ್ವತಃ ಮಾತನಾಡಿ, ಬೇರೆಯವರು ಮಾತನಾಡುವುದನ್ನು ಕೇಳಿ ಕಲಿಯಬೇಕು. ಭಾಷೆ ಕಲಿಯುವುದರಿಂದ ಊರಿನ ಸಾಂಸ್ಕೃತಿಕ ಬದುಕಿನ ಪರಿಚಯವೂ ಆಗಲಿದೆ ಎಂದರು.

ವಿಶೇಷ ಕಾರ್ಯಪಡೆ ಪ್ರಭಾರ ಪೊಲೀಸ್ ಉಪ ಅಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಕಾನೂನು ಸುವ್ಯವಸ್ಥೆ ಡಿಸಿಪಿ ಮಿಥುನ್ ಎಚ್.ಎನ್. ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯ ಸಂಚಾಲಕ ನಾಗೇಶ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಎಎಸ್‌ಎ್ ಸಿಬಂದಿ ರವಿಪ್ರಕಾಶ್ ಸ್ವಾಗತಿಸಿ, ವಂದಿಸಿದರು.

ಎಸ್‌ಎಎ್ನ ಉಡುಪಿ ಮತ್ತು ಮಂಗಳೂರು ಕಂಪೆನಿಯ ಸುಮಾರು 150 ಮಂದಿ ಸಿಬಂದಿ, ಅಧಿಕಾರಿಗಳಿಗೆ ತುಳು ಕಲಿಕಾ ಕಾರ್ಯಾಗಾರ ನಡೆಯಲಿದೆ.