ಉಡುಪಿ: ತುಳುವರು ಹೊಣೆಯರಿತು ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಬೇಕು ಎಂದು ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಸ್‌ಸಾರ್ ಕರೆ ನೀಡಿದರು.
ಭಾನುವಾರ ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ ನಡೆದ ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಷ್ಟ ಮಠಾಧೀಶರು ಸಹಿ ಮಾಡುವ, ಮಲಯಾಳಂ ಭಾಷೆಗೆ ಲಿಪಿ ನೀಡಿದ, ಸಂಸ್ಕೃತದ ಓಂಕಾರ ಬರೆಯುವ ಲಿಪಿ ತುಳುವಿನದ್ದಾಗಿದ್ದರೂ, ತುಳುವಿಗೆ ಸಿಗಬೇಕಾದ ಸಿಗಬೇಕಾಗಿದ್ದ ಮಾನ್ಯತೆ ಇನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ತುಳು ಭಾಷೆ ಬೆಳವಣಿಗೆಗೆ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ಮಾತನಾಡಿ, ತುಳು ಭಾಷೆ, ಸಾಹಿತ್ಯ, ನಾಟಕರಂಗಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ದುಡಿದ ಕೆಮ್ತೂರು ದೊಡ್ಡಣ ಶೆಟ್ಟಿ ಅವರ ಆದರ್ಶ ಇಂದಿನ ತುಳುಪರ ಸಂಘಟನೆಗಳಿಗೆ, ಹೋರಾಟಗಾರರಿಗೆ ಮಾದರಿ ಎಂದರು.
ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರ, ಪ್ರಥಮ ತುಳು ಲಿಪಿ ನಾಟಕ ಪಿಂಗಾರದ ಬಾಲೆ ಸಿರಿ ನಾಟಕವನ್ನು ದಯಾನಂದ ಜಿ. ಕತ್ತಲ್‌ಸಾರ್ ಅನಾವರಣಗೊಳಿಸಿದರು. ತುಳುಕೂಟದ ತುಳು ಮಿನದನ ಸ್ಪರ್ಧೆ, ದಿವಂಗತ ನಿಟ್ಟೂರು ಸಂಜೀವ ಭಂಡಾರಿ ನೆನಪಿನ ಭಾವಗೀತೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತುಳು ಲಿಪಿ ಅಭಿಯಾನ ನಡೆಸಿದ ಜೈ ತುಳುನಾಡ್ ಸಂಸ್ಥೆಗೆ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಐಚ್ಛಿಕ ಭಾಷಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಸ್ತಾವಿಸಿದರು.
ಶಾಸಕ ಕೆ.ರಘುಪತಿ ಭಟ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಆಕಾಶ್‌ರಾಜ್ ಜೈನ್, ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಮುಖ್ಯಸ್ಥ ಡಾ.ಮಾಧವ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ನಾಯ್ಕ್, ಕೆಮ್ತೂರು ಕುಟುಂಬದ ವಿಜಯಕುಮಾರ್ ಶೆಟ್ಟಿ, ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ನಿಕಟಪೂರ್ವಾಧ್ಯಕ್ಷ ವಿ.ಜಿ.ಶೆಟ್ಟಿ, ಉಪಾಧ್ಯಕ್ಷೆ ವೇದಾವತಿ, ನಾಟಕ ಸ್ಪರ್ಧೆಯ ಸಂಚಾಲಕ ಬಿ.ಪ್ರಭಾಕರ್ ಭಂಡಾರಿ ಉಪಸ್ಥಿತರಿದ್ದರು. ತುಳುಕೂಟದ ಕಾದಂಬರಿ ಸ್ಪರ್ಧೆ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ನಿರೂಪಿಸಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ. ವಂದಿಸಿದರು.