ಜಿಲ್ಲೆ

ಮೈಸೂರಿನಲ್ಲಿ ತುಳಸಿ ಹಬ್ಬ ಆಚರಣೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಶ್ರದ್ಧಾ, ಭಕ್ತಿಯೊಂದಿಗೆ ಮನೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ತುಳಸಿ ಹಬ್ಬ ಆಚರಿಸಲಾಯಿತು.

ಭಗವಾನ್ ಶ್ರೀ ಮಹಾವಿಷ್ಣು ಹಾಗೂ ತುಳಸಿ ದೇವಿಯ ವಿವಾಹ ದಿನವನ್ನು ತುಳಸಿ ಹಬ್ಬವಾಗಿ ಆಚರಿಸಲಾಗುತ್ತದೆ. ಹಾಗಾಗಿ ತುಳಸಿ ಹಬ್ಬದಂದು ತುಳಸಿಗೆ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದವರ ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ, ಶಾಂತಿ ಹಾಗೂ ಉತ್ತಮ ವೈವಾಹಿಕ ಜೀವನದ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ. ತುಳಸಿಯನ್ನು ಲಕ್ಷ್ಮೀ ದೇವಿಯ ಅವತಾ ರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀಯು ಸಂಪತ್ತು, ಸಮೃದ್ಧಿ, ಸಂತೋಷ ಮತ್ತು ಶಾಂತಿಯ ದೇವತೆಯಾಗಿದ್ದು, ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಮನೆಯಲ್ಲಿ ಶ್ರದ್ಧಾಭಕ್ತಿಯೊಂದಿಗೆ ತುಳಸಿಗಿಡಕ್ಕೆ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.

ತುಳಸಿ ಗಿಡ ವಿತರಣೆ:

ನಗರದ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಹಾಗೂ ತುಳಸಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಇದೇ ಸಂದರ್ಭ ಭಕ್ತಾದಿಗಳಿಗೆ 100 ತುಳಸಿ ಗಿಡಗಳನ್ನು ವಿತರಿಸಲಾಯಿತು.

ತುಳಸಿ ಹಬ್ಬದ ಪ್ರಯುಕ್ತ ದೇವಸ್ಥಾನದ ಅರ್ಚಕ ಎಸ್. ಕೃಷ್ಣಮೂರ್ತಿ ಅವರಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ತುಳಸಿ ಕಟ್ಟೆಗೆ ಪೂಜೆ ನೆರವೇರಿಸಲಾಯಿತು. ಅಲ್ಲದೆ, ಹೋಮ ನಡೆಸಲಾಯಿತು. ದೇವಸ್ಥಾನದಲ್ಲಿ ತುಳಸಿ ಕಟ್ಟೆಗೆ ವಿಶೇಷ ಅಲಂಕರಿಸಿ ಮಾಡಿ ನಂತರ ಪೂಜೆ ಸಲ್ಲಿಸಲಾಯಿತು.

ಅರ್ಚಕ ಎಸ್. ಕೃಷ್ಣಮೂರ್ತಿ ಭಕ್ತಾದಿಗಳಿಗೆ ತುಳಸಿಗಿಡ ವಿತರಣೆ ಮಾಡಿ ಮಾತನಾಡಿ, ತುಳಸಿಗಿಡಕ್ಕೆ ಹಿಂದು ಧರ್ಮದಲ್ಲಿ ವಿಶೇಷವಾದ ಸ್ಥಾನವಿದೆ. ಹಿಂದುಗಳಿಗೆ ತುಳಸಿ ಗಿಡವು ಅವಿಭಾಜ್ಯ ಅಂಗವಾಗಿದೆ. ತುಳಸಿಗಿಡವನ್ನು ಮನೆಯಲ್ಲಿ ಬೆಳೆಸಿ ಬಳಸಿದರೆ ವಿವಿಧ ಕಾಯಿಲೆಗಳು ಬರುವುದಿಲ್ಲ. ತುಳಸಿಗಿಡವು ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ. ಹೀಗಾಗಿ ಎಲ್ಲರು ತುಳಸಿ ಗಿಡವನ್ನು ನೆಟ್ಟು ಬೆಳೆಸಿ ಪೂಜಿಸಬೇಕು ಎಂದರು.

ದೇವಸ್ಥಾನದಲ್ಲಿ ಪ್ರತಿವರ್ಷ ಕಾರ್ತಿಕ ಮಾಸ ಹಾಗೂ ತುಳಸಿ ಹಬ್ಬದ ಪ್ರಯುಕ್ತ ಭಕ್ತಾದಿಗಳಿಗೆ ತುಳಸಿಗಿಡವನ್ನು ಉಚಿತವಾಗಿ ನೀಡುತ್ತಾ ಬರುತ್ತಿದ್ದೇವೆ. ಅದೇ ರೀತಿ ಈ ವರ್ಷವೂ ಸಹ 100 ಭಕ್ತಾದಿಗಳಿಗೆ ತುಳಸಿ ಗಿಡಗಳನ್ನು ನೀಡಿದ್ದೇವೆ. ಹಬ್ಬದ ದಿನದಂದು ಸಮಸ್ತ ಭಕ್ತರು, ರಾಷ್ಟ್ರ, ಲೋಕಕ್ಕೆ ಒಳಿತಾಗಲಿ ಎಂದು ಮಹಾಗಣಪತಿ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ತುಳಸಿಗಿಡ ವಿತರಣೆ ಸಂದರ್ಭ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಪ್ರಮುಖರಾದ ಎಸ್.ಪ್ರಕಾಶ್ ಪ್ರಿಯದರ್ಶನ್, ಜಿ.ರಾಘವೇಂದ್ರ, ಎಸ್.ಎನ್. ರಾಜೇಶ್ ಹಾಗೂ ಭಕ್ತಾದಿಗಳು ಇದ್ದರು.