ಜಿಲ್ಲೆ

ತಿಂಗಳು ಕಳೆದರೂ ತೆರವಾಗದ ಟಗ್

ಪಡುಬಿದ್ರಿ: ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಕಾಡಿಪಟ್ಣ ಕಡಲತೀರ ಸೇರಿದ ಅಲಯನ್ಸ್ ಟಗ್ ಸ್ಥಳಾಂತರ ಇನ್ನೂ ನಾಲ್ಕು ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ. ಟಗ್ ದುರಂತಕ್ಕೀಡಾಗಿ ಮಂಗಳವಾರಕ್ಕೆ ಒಂದು ತಿಂಗಳು ಕಳೆದಿದೆ.

ಟಗ್ ಸುಸ್ಥಿತಿಗೆ ತಂದು ಸ್ಥಳಾಂತರಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಂಬಂಧ ಟಗ್ ಕಂಪನಿ ಮರ್ಕೆಂಟೈಲ್ ಮರೈನ್ ವಿಭಾಗ (ಎಂಎಂಡಿ) ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಮುಂಗಾರು, ಕಡಲ ಅಬ್ಬರದಿಂದ ಅದು ಇನ್ನೂ 4 ತಿಂಗಳು ಒಪ್ಪಿಗೆ ಸಿಗುವುದು ಅನುಮಾನ. ಅಲ್ಲಿಯತನಕ ಕಾಡಿಪಟ್ಣದಲ್ಲೇ ಉಳಿಸಲು ಪ್ರಯತ್ನ ಮುಂದುವರಿಸುತ್ತೇವೆ. ಬಳಿಕ ಗುಜರಾತ್ ಅಥವಾ ಮಂಗಳೂರಿಗೆ ಎಳೆದೊಯ್ಯುವ ಇಲ್ಲವೇ ಬೇರೆಡೆ ಸ್ಥಳಾಂತರಿಸಿ ಸ್ಕ್ರಾಪ್ ಮಾಡುವ ಬಗ್ಗೆ ಯೋಚಿಸಲಿದೆ. ಸುಮಾರು 8-10 ಕೋಟಿ ರೂ. ಮೌಲ್ಯದ ಟಗ್ ಉಳಿಸಲು ಹೆಚ್ಚು ಶ್ರಮ ವಹಿಸಲಾಗುವುದು ಎಂದು ಗುಜರಾತ್ ಮೂಲದ ಅಲಯೆನ್ಸ್ ಟಗ್ ಕಂಪನಿ ವಕ್ತಾರ ಶೌಕತ್ ಸಂಧಿ ವಿಜಯವಾಣಿಗೆ ತಿಳಿಸಿದ್ದಾರೆ.

ಟಗ್ ತೆರವಿಗೆ ಮುಖ್ಯ ಅಡಚಣೆಯಾಗಿದ್ದ ತೈಲವನ್ನು ಮಂಗಳೂರಿನ ಮೊಹಮ್ಮದ್ ಖಲಂದರ್ ತಂಡ ತೆರವುಗೊಳಿಸಿದೆ. ಟಗ್ ತೆರವಿನ ಹೊಣೆ ಹೊತ್ತಿರುವ ಮಂಗಳೂರು ಬದ್ರಿಯಾ ಕಂಪನಿಯ ಬಿಲಾಲ್ ಮೊಯ್ದೀನ್ ತಂಡ ಮೇ 17ರಿಂದ ನಿತ್ಯ ಕಾಡಿಪಟ್ಣಕ್ಕೆ ಆಗಮಿಸಿ ಟಗ್‌ನಲ್ಲಿ ತುಂಬಿದ್ದ ಸಮುದ್ರ ನೀರು ಮತ್ತು ಮರಳು ತೆರವಿಗೆ ಶ್ರಮ ವಹಿಸುತ್ತಿದೆ. ನಿರಾಕ್ಷೇಪಣಾ ಪತ್ರ ದೊರೆತಲ್ಲಿ ನಮ್ಮ ತಂಡ ಮಂಗಳೂರು ಅಥವಾ ಗುಜರಾತ್‌ಗೆ ಟಗ್ ಕೊಂಡೊಯ್ಯಲಿದೆ ಎನ್ನುತ್ತಾರೆ ಬಿಲಾಲ್.

ಟಗ್ ಮಾಲೀಕರೊಂದಿಗೆ ಮಾತುಕತೆಗೆ ನಿರ್ಧಾರ: ಮಳೆ ಮತ್ತು ಸಮುದ್ರ ಅಬ್ಬರದ ಅಲೆಗಳ ಹೊಡೆತಕ್ಕೆ ಟಗ್ ತೀರಕ್ಕೆ ಸರಿದಿದೆ. ಆಷಾಢ ಮಾಸದಲ್ಲಿ ಅಲೆಗಳ ಅಬ್ಬರ ಮತ್ತಷ್ಟು ಜೋರಾಗಲಿದ್ದು, ಆ ಸಂದರ್ಭ ಟಗ್ ಯಥಾಸ್ಥಿತಿಯಲ್ಲಿರುವುದು ಅನುಮಾನ. ಬಿಲಾಲ್ ತಂಡ ಟಗ್ ಚಲಿಸದಂತೆ ಸೂಕ್ತ ಬಂದೋಬಸ್ತ್ ನಡೆಸಿದ್ದರೂ, ಸಮುದ್ರದ ಅಬ್ಬರಕ್ಕೆ ಪೂರ್ವಕ್ಕೆ ಚಲಿಸಬಹುದು ಎಂದು ಅನುಭವಿ ಮೀನುಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಟಗ್ ಇರುವ ಜಾಗ ಸಾಂಪ್ರದಾಯಿಕ ಮೀನುಗಾರಿಕೆಗೆ ಅಡಚಣೆ ಉಂಟು ಮಾಡುವುದರಿಂದ ಶೀಘ್ರ ತೆರವಿಗೆ ಮೀನುಗಾರರು ಒತ್ತಾಯಿಸಿದ್ದಾರೆ. ಮಂಗಳವಾರ ಶ್ರೀವಿಷ್ಣು ಭಜನಾ ಮಂದಿರದಲ್ಲಿ ಅಧ್ಯಕ್ಷ ಲೀಲಾಧರ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಟಗ್ ತೆರವು ಬಗ್ಗೆ ಟಗ್ ಮಾಲೀಕರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ.