ತಿಪಟೂರು : ತಾಲೂಕಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷವಾದರೂ ಟುಡಾ ಸೇರಿ ಕೆಲ ಸಂಸ್ಥೆಗಳಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಪಕ್ಷ ಅನುಮತಿ ನೀಡದಿರುವುದು ಶಾಸಕ ಬಿ.ಸಿ.ನಾಗೇಶ್‌ಗೆ ಧರ್ಮ ಸಂಕಟವಾಗಿದೆ. ನಾಗೇಶ್ ಗೆಲುವಿಗೆ ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವುದು ನಿರಾಸೆ ತಂದಿದೆ.
ನಗರದ ಜನತೆಗೆ ಅತ್ಯಗತ್ಯವಾಗಿರುವ ಟುಡಾ (ತಿಪಟೂರು ಯೋಜನಾ ಪ್ರಾಧಿಕಾರ), ನಗರಸಭೆ, ತಾಲೂಕು ಪಂಚಾಯಿತಿ, ಬಗರ್ ಹುಕುಂ ಕಮಿಟಿ, ಮುಜರಾಯಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಪ್ರೌಢಶಾಲೆಗೂ ಮೇಲ್ಪಟ್ಟ ಸರ್ಕಾರಿ ಕಾಲೇಜುಗಳು ಸೇರಿ ವಿವಿಧ ಸಂಸ್ಥೆಗಳಿಗೆ ನಾಮನಿರ್ದೇಶನ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿದೆ. ಆದರೆ, ಸರ್ಕಾರಿ ಆಸ್ಪತ್ರೆ, ಬಗರ್ ಹುಕುಂ ಕಮಿಟಿ, ಮತ್ತು ಮುಜರಾಯಿ ಇಲಾಖೆ ಜತೆಗೆ ಇತ್ತೀಚೆಗೆ ನಡೆದ ಎಪಿಎಂಸಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿಯ ಮೂವರು ಸದಸ್ಯರನ್ನು ನಾಮಿನಿ ಸದಸ್ಯರಾಗಿ ಆಯ್ಕೆ ಮಾಡಿದ್ದು ಬಿಟ್ಟರೆ (ಈ ಪೈಕಿ ಓರ್ವ ಮಹಿಳಾ ನಾಮಿನಿ ತಾಂತ್ರಿಕ ಕಾರಣದಿಂದ ಹೊರಗುಳಿದಿದ್ದಾರೆ), ಇಲ್ಲಿವರೆಗೂ ಉಳಿದ ಸಂಸ್ಥೆಗಳಿಗೆ ನಾಮಿನಿ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಪಕ್ಷ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎನ್ನಲಾಗುತ್ತಿದೆ.
ಕಳೆದ ಬಾರಿ ಕಾಂಗ್ರೆಸ್ ಆಡಳಿತವಿದ್ದಾಗ ಒಂದೂವರೆ ವರ್ಷಗಳ ನಂತರ ನಾಮಿನಿ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಬಿಜೆಪಿಯಲ್ಲಿ ಆಯ್ಕೆ ಪ್ರಕ್ರಿಯೆ ಭಿನ್ನವಾಗಿದ್ದು, ಪಕ್ಷದ ಹೈ ಕಮಾಂಡ್ ನಿರ್ದೇಶನ ನೀಡುವವರೆಗೂ ನಾಮಿನಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲ್ಲ. ಇದು ಪಕ್ಷಕ್ಕೆ ದುಡಿದ ಅನೇಕ ಕಾರ್ಯಕರ್ತರಿಗೆ ಬಿಸಿ ತುಪ್ಪವಾದರೂ, ಪಕ್ಷದ ಶಿಸ್ತು ಮತ್ತು ಚೌಕಟ್ಟಿನೊಳಗಿರುವ ನಿಷ್ಠಾವಂತ ಕಾರ್ಯಕರ್ತರು ನಿರಾಸೆ ಅನುಭವಿಸುತ್ತಿರುವುದಂತೂ ಸತ್ಯ.
ಈಗಾಗಲೇ ತುಮಕೂರಿನಲ್ಲಿ ಟುಡಾ ಅಧ್ಯಕ್ಷರ ನೇಮಕಾತಿ ಆಗಿದೆ. ಆದರೆ ತಿಪಟೂರು ಮತ್ತು ತುರುವೇಕೆರೆಯಲ್ಲಿ ಸದ್ಯಕ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳಿದ್ದು, ಎಲ್ಲರನ್ನೂ ಸಮಾಧಾನಪಡಿಸುವುದು ಅಸಾಧ್ಯ, ಹಾಗಂತ ಉಳಿದವರನ್ನು ಕಡೆಗಣಿಸುವಂತೆಯೂ ಇಲ್ಲ. ಇದೂ ಕೂಡ ಶಾಸಕ ಬಿ.ಸಿ.ನಾಗೇಶ್‌ರ ಧರ್ಮಸಂಕಟಕ್ಕೆ ಕಾರಣ ಎಂಬ ಮಾತೂ ಕೇಳಿಬರುತ್ತಿದೆ.
ಜಿಲ್ಲಾ ಕೇಂದ್ರ ಅಥವಾ ಬೇರೆ ಕಡೆ ನಾಮಿನಿ ಸದಸ್ಯರ ನೇಮಕವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ವರಿಷ್ಠರ ಆದೇಶದಂತೆ ನಾಮಿನಿ ಸದಸ್ಯರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಯಾರೊಬ್ಬರೂ ನನ್ನ ಬಳಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಎಲ್ಲರೂ, ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವ ಭರವಸೆ ನನಗಿದೆ. ಬಿ.ಸಿ.ನಾಗೇಶ್, ಶಾಸಕ ತಿಪಟೂರು ಇರುವ ಅವಕಾಶವನ್ನು ಯಾರಿಗಾದರೂ ನೀಡಿ ಸ್ಥಾನ ಭರ್ತಿ ಮಾಡಲಿ. ಕೆಲವರು ಬೇಸರಗೊಳ್ಳುತ್ತಾರೆಂದು ಸುಮ್ಮನಿದ್ದರೆ ಅಭಿವೃದ್ಧಿ ಅಸಾಧ್ಯ. ಇರುವ ಜವಾಬ್ದಾರಿ ಹಂಚಿ, ಮೇಲುಸ್ತುವಾರಿ ವಹಿಸಬೇಕು. ಅಧಿಕಾರಿಗಳ ತಂಡ ಕಟ್ಟಿಕೊಂಡು ಆಡಳಿತ ನಡೆಸಿದರೆ ಜನರ ಭಾವನೆ ಶಾಸಕರಿಗೆ ತಲುಪಲ್ಲ. ಜನರ ಮಧ್ಯೆ ಇರುವ ಕಾರ‌್ಯಕರ್ತರ ಪಡೆಗೆ ಈ ಜವಾಬ್ದಾರಿ ಕೊಡಬೇಕು. ಇದರಿಂದ ಶಾಸಕರ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಸಿಂಗ್ರಿ ದತ್ತಪ್ರಸಾದ್, ನಗರಸಭೆ ಮಾಜಿ ಸದಸ್ಯ, ತಿಪಟೂರು