ಮಂಡ್ಯ: ತಾಲೂಕಿನ ಹೊಳಲು ಗ್ರಾಮದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜು.18ರಿಂದ ಆ.15ರವರಗೆ ಜಿಲ್ಲಾದ್ಯಂತ ಆಂದೋಲನ ನಡೆಯಲಿದೆ. ಕೆಮ್ಮಿನ ಜತೆ ರಕ್ತ ಬೀಳುವುದು, ಜ್ವರ, ತೂಕ ಕಡಿಮೆಯಾಗುವುದು, ಹಸಿವಾಗದೇ ಇರುವುದು ಕ್ಷಯ ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳಿದ್ದಲ್ಲಿ ಟಿಬಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕ್ಷಯ ರೋಗದ ಲಕ್ಷಣ ಇರುವವರಿಗೆ ಕವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಎಚ್.ಡಿ.ರವಿ ಮಾತನಾಡಿ, ನಮ್ಮ ಗ್ರಾಮವನ್ನು ಕ್ಷಯ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು. ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು ಎಂದು ಸಲಹೆ ನೀಡಿದರು.
ಡೇರಿ ಅಧ್ಯಕ್ಷೆ ಪದ್ಮಾ, ಮಾಜಿ ಅಧ್ಯಕ್ಷ ಟಿ.ಟಿ.ಶ್ರೀನಿವಾಸ್, ತಿಮ್ಮೇಗೌಡ, ಉಪಾಧ್ಯಕ್ಷೆ ಪಲ್ಲವಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಶಂಕರ್, ಸದಸ್ಯ ಅಭಿನಂದನ್ ಇತರರಿದ್ದರು.