ಮಂಡ್ಯ: ಕ್ಷಯ ಮಾರಕವಾದ ರೋಗವಾಗಿದ್ದರೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಗುಣಪಡಿಸಬಹುದಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ಡವರಿ ಸಮಾಜದ ಸ್ಲಂನಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾದ್ಯಂತ ಜು.17 ರಿಂದ ಆ.2ರವರೆಗೆ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕ್ಷಯ ರೋಗ ಕಂಡುಬರುವ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ಸರ್ಕಾರದಿಂದ ನೀಡಲಾಗುವುದು. ಜತೆಗೆ 500 ರೂ ಮತ್ತು ಫುಡ್‌ಕಿಟ್ ವಿತರಿಸಲಾಗುವುದು. ಸತತವಾಗಿ ಎರಡು ವಾರದಿಂದ ಕೆಮ್ಮು ಬರುತ್ತಿದ್ದರೆ ಅಥವಾ ಅದು ನಿಂತಿಲ್ಲದಿದ್ದರೆ ಕಫ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಈ ರೋಗವನ್ನು ಹೋಗಲಾಡಿಸಲು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿಕಾರಿಗಳು ತುಂಬಾ ಶ್ರಮಪಡುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಸಹಕರಿಸಿ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಬೇಕು. ಜಿಲ್ಲೆಯಲ್ಲಿ 18 ಲಕ್ಷ ಜನರು ವಾಸವಿದ್ದು, ಈ ಪೈಕಿ 3,38,000 ಜನರ ಸ್ಯಾಂಪಲ್ ಅನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್.ಆಶಾಲತಾ ಮಾತನಾಡಿ, ಕೆಲಸಕ್ಕಾಗಿ ವಲಸೆ ಬರುವ ಜನರು ಇರುವ ಪ್ರದೇಶ ಹಾಗೂ ಹೈರಿಸ್ಕ್ ಪ್ರದೇಶದಲ್ಲಿ ಕೇಸ್ ಇರುವ ಕಡೆ ಎಲ್ಲ ಮನೆ ಮನೆಗೂ ಹೋಗಿ ರೋಗ ಲಕ್ಷಣದ ಮಾಹಿತಿ ನೀಡುವುದರ ಜತೆಗೆ ಕಫ ಪರೀಕ್ಷೆ ಮಾಡಿಸಲಾಗುತ್ತಿದೆ. ರೋಗದ ಬಗ್ಗೆ ಪರೀಕ್ಷೆ ನಡೆಸಲು ಜಿಲ್ಲಾದ್ಯಂತ 315 ಆರೋಗ್ಯ ಅಧಿಕಾರಿಗಳ ಗುಂಪು ರಚನೆ ಮಾಡಲಾಗಿದೆ. ರೋಗದ ಲಕ್ಷಣ ಇದ್ದರೆ ಅವರೇ ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು. ಕಫ ಸಂಗ್ರಹಣೆ ಮಾಡಿ ಪರೀಕ್ಷೆ ಮಾಡಲಾಗುವುದು ಎಂದರು.
ನಗರಸಭಾ ಸದಸ್ಯ ನಾಗೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಆರ್.ಶಶಿಧರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ ಇತರರಿದ್ದರು.