ಜಿಲ್ಲೆ

ದೊಡ್ಡಬಳ್ಳಾಪುರದಲ್ಲಿ ತೂಬಗೆರೆ ಹಲಸಿನ ಘಮಲು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ತೂಬಗೆರೆ

ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಹಲಸಿನ ಹಣ್ಣಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ವಿಶೇಷ ಬಣ್ಣ ಹಾಗೂ ರುಚಿ ಹೊಂದಿರುವ ಈ ಭಾಗದ ಹಲಸಿಗೆ ನೆರೆ ಜಿಲ್ಲೆ ಸೇರಿ ಹೊರ ರಾಜ್ಯದಲ್ಲೂ ಬೇಡಿಕೆ ಇದೆ. ಕಟಾವಿಗೆ ಬಂದಿರುವ ಹಲಸಿನ ವ್ಯಾಪಾರ ಜೋರಾಗಿದ್ದು ಹಣ್ಣು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ.

ತೂಬಗೆರೆಯಿಂದ ಘಾಟಿ ಸುಬ್ರಹ್ಮಣ್ಯ ದೇಗುಲ ಮಾರ್ಗವಾಗಿ ದೊಡ್ಡಬಳ್ಳಾುರ ನಗರ ಸಂಪರ್ಕಿಸುವ ರಸ್ತೆಯುದ್ದಕ್ಕೂ ಹಲಸಿನ ಹಣ್ಣಿನ ವ್ಯಾಪಾರ ಆರಂಭವಾಗಿದೆ. ಘಾಟಿ ಕ್ಷೇತ್ರಕ್ಕೆ ಬರುವ ಭಕ್ತರು ಹಣ್ಣನ್ನು ಖರೀದಿಸಲು ಮುಗಿಬಿದ್ದಿರುವ ದೃಶ್ಯಗಳು ಕಂಡುಬರುತ್ತಿವೆ.

ಬೆಳೆಗಾರರಿಂದ ಮೇಳ: ತೂಬಗೆರೆ ಹಲಸು ಬೆಳೆಗಾರರ ಸಂಘದಿಂದ ಈಗಾಗಲೆ ಕೆಲವು ಕಡೆಗಳಲ್ಲಿ ಹಲಸಿನ ಮೇಳ ಆಯೋಜಿಸಲಾಗುತ್ತಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದೇ ತಿಂಗಳ ಅಂತ್ಯದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ದೇವನಹಳ್ಳಿ ಭಾಗದಲ್ಲಿ ಹಲಸಿನ ಮೇಳ ನಡೆಸಲು ಸಿದ್ದತೆ ನಡೆಯುತ್ತಿದ್ದು ತೂಬಗೆರೆ ಹಲಸಿಗೆ ವಿಶೇಷ ಸ್ಟಾಲ್‌ಗಳನ್ನು ವ್ಯವಸ್ಥೆ ಮಾಡುವ ಚಿಂತನೆ ಇದೆ. ಮೇ 7 ರಂದು ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ನಡೆದ ಮಾಂಗಲ್ಯಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿಯೂ ತೂಬಗೆರೆ ಹಲಸಿನ ವ್ಯಾಪಾರ ಭರ್ಜರಿಯಾಗಿತ್ತು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಲಸಿನ ಹಣ್ಣು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ತೂಬಗೆರೆ ಪ್ರಾಂತ್ಯದ ಹಲಸಿನ ಹಣ್ಣಿನ ವಿಶೇಷತೆ ಬಗ್ಗೆ ತಿಳಿದುಕೊಂಡಿದ್ದೇವೆ, ಇಲ್ಲಿನ ತಳಿಯ ಹಲಸಿನಲ್ಲಿ ವಿಶೇಷ ರುಚಿ ಇದೆ ಹಲಸು ಮೇಳ ಆಯೋಜನೆಯಿಂದ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಲಸು ಬೆಳೆಗಾರರು ಮೇಳ ಆಯೋಜನೆಗೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಸ್ಪಂದಿಸಿ ಮೇಳ ಆಯೋಜನೆ ಬಗ್ಗೆ ಭರವಸೆ ನೀಡಿದ್ದಲ್ಲದೆ ಹಲಸಿನ ಹಣ್ಣು ಸವಿದು ಬೆಳೆಗಾರರ ಬೆನ್ನುತಟ್ಟಿದ್ದರು.

ವಿವಿಧ ತಳಿಯ ವಿಶೇಷ ಹಣ್ಣು: ಹಳದಿ ಬಣ್ಣದ ಹೆಬ್ಬಲಸು, ಬೇರು ಹಲಸು, ಚಂದ್ರಹಲಸು, ನೀರುತೊಳೆ, ಬಿಳಿ, ಹಳದಿ ತೊಳೆಹಣ್ಣು ಸೇರಿ ವಿವಿಧ ತಳಿಯ ವಿಶೇಷ ಹಲಸಿನ ಹಣ್ಣು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಪ್ರಸ್ತುತ ಹಲಸಿನ ಸುಗ್ಗಿ ಕಾರಣ ದೊಡ್ಡಬಳ್ಳಾಪುರದಿಂದ ತೂಬಗೆರೆ ಮಾರ್ಗದಲ್ಲಿ ಹಲಸಿನ ಘಮ ಜನರ ಮೂಗಿಗೆ ಬಡಿಯುತ್ತಿದೆ. ಮಾರುಕಟ್ಟೆ, ಪ್ರಮುಖ ಜನನಿಬಿಡ ಪ್ರದೇಶ, ರಸ್ತೆಬದಿಗಳಲ್ಲಿ ಮಾರಾಟಜೋರಾಗಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ರಸ್ತೆಗಳ ರಾಹೆ-7 ಮತ್ತು 207ರ ಉದ್ದಕ್ಕೂ ಎರಡೂ ಬದಿ ಹಲಸಿನ ಹಣ್ಣುಗಳ ರಾಶಿ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಣ್ಣಿನ ಮಾರಾಟ ಜೋರಾಗಿದೆ.

ಔಷಧಿ ಗುಣ: ಹಲಸಿನ ಹಣ್ಣಿನಲ್ಲಿ ಔಷಧೀಯ ಅಂಶಗಳನ್ನು ಒಳಗೊಂಡಿದೆ. ಅಧಿಕ ಪ್ರಮಾಣದಲ್ಲಿ ವಿಟಮಿನ್ ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್, ಕ್ಯಾಲ್ಸಿಯಮ್, ಪೊಟಾಶಿಯಮ್ ಅಂಶಗಳು ಹಣ್ಣಿನಲ್ಲಿ ಅಡಕವಾಗಿರುತ್ತದೆ ಎನ್ನಲಾಗಿದೆ.

ಮರಗಳ ಸಂರಕ್ಷಣೆಗಿರಲಿ ಎಚ್ಚರ: ಇಲ್ಲಿನ ಹಲಸಿನ ಗುಣಮಟ್ಟ, ರುಚಿ ಹಾಗೂ ಬಣ್ಣ ವಿಶೇಷವಾಗಿದ್ದು ಎಲ್ಲೆಡೆ ಬೇಡಿಕೆ ಇದೆ. ಆದರೆ ಸಲಿಗೆ ಕಾಡುವ ಕೀಟಬಾಧೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ತೂಬಗೆರೆ ಹಲಸು ಸಹ ಪ್ರಾಮುಖ್ಯತೆ ಕಳೆದುಕೊಳ್ಳುವ ಅಪಾಯದಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಎಚ್ಚರಿಕೆ ವಹಿಸಬೇಕು ಎಂದು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ. ಕಾಲಕಾಲಕ್ಕೆ ತೋಟಗಾರಿಕೆ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸಬೇಕು ಮತ್ತು ಔಷಧಿಗಳನ್ನು ಸಿಂಪಡಿಸಿ ರೋಗ ನಿಂತ್ರಣಕ್ಕೆ ತರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲೇ ತೂಬಗೆರೆ ಹಲಸಿಗೆ ವಿಶೇಷ ಬೇಡಿಕೆ ಇದೆ, ಇಲ್ಲಿನ ತಳಿಯ ಹಲಸಿನ ಬಣ್ಣ ಹಾಗೂ ವಿಶೇಷ ರುಚಿ ಬೇರೆ ಕಡೆ ಕಾಣಲು ಸಾಧ್ಯವಿಲ್ಲ. ಪ್ರಸ್ತುತ ಹಲಸಿನ ಸುಗ್ಗಿಯಾಗಿದ್ದು, ಈ ಬಾರಿ ಉತ್ತಮ ಸಲು ಕಂಡುಬಂದಿದೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲದೆ ಬೆಳೆಗಾರರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಬೆಳೆಗಾರರೇ ಸೇರಿ ಮೇಳ ಆಯೋಜಿಸುತ್ತೇವೆ ಇದರೊಂದಿಗೆ ತೋಟಗಾರಿಕೆ ಇಲಾಖೆಯೂ ಮೇಳ ಆಯೋಜಿಸುವ ಭರವಸೆ ನೀಡಿರುವುದು ತುಸು ಸಂತಸ ತಂದಿದೆ.

ಶಿವಕುಮಾರ, ಹಲಸು ಬೆಳೆಗಾರ