ಜಿಲ್ಲೆ

ತೂಬಗೆರೆ ಹೋಬಳಿಯಲ್ಲಿ ಕಟ್ಟೆಚ್ಚರ, ಸೋಂಕು ಮಣಿಸಲು ಕಟ್ಟುನಿಟ್ಟಾಗಿ ಲಾಕ್‌ಡೌನ್ ಆದೇಶ ಪಾಲಿಸಿ

ತೂಬಗೆರೆ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ಸಾಮಾಜಿಕ ಅಂತರ ಕುರಿತು ಅರಿವು ಮೂಡಿಸಲು ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಮೇಳೆಕೋಟೆ, ಹಾಡೋನಹಳ್ಳಿ ಹಾಗೂ ತೂಬಗೆರೆ ಗ್ರಾಪಂಗಳಲ್ಲಿ ಬುಧವಾರ ಡಿವೈಎಸ್‌ಪಿ ಟಿ. ರಂಗಪ್ಪ ಸಮ್ಮುಖದಲ್ಲಿ ಸಭೆ ನಡೆಯಿತು.

ಗ್ರಾಮಾಂತರ ಜಿಲ್ಲೆಯಲ್ಲಿ ಮೂವರು ಸೋಂಕಿತರು ಪತ್ತೆಯಾಗಿದ್ದು, ಇದು ಇನ್ನಷ್ಟು ವ್ಯಾಪಿಸದಂತೆ ತಡೆಯಲು ಜನರು ಮುಂಜಾಗ್ರತೆ ವಹಿಸಬೇಕು. ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಂದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ರಂಗಪ್ಪ ತಿಳಿಸಿದರು.

ಗೌರಿಬಿದನೂರಿನಲ್ಲಿ ಕಾಣಿಸಿಕೊಂಡ ಕರೊನಾ ನಮ್ಮ ಭಾಗಕ್ಕೆ ಹರಡದಂತೆ ಹೋಬಳಿಯ ಗಡಿಯಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ. ಗೌರಿಬಿದನೂರಿಗೆ ಹೋಗುವುದಾಗಲಿ, ಬರುವುದಾಗಲಿ ಮಾಡಬಾರದು. ಗ್ರಾಮಕ್ಕೆ ಯಾರಾದರೂ ಹೊಸಬರು ಬಂದರೆ ಅಂತಹವರಿಂದ ಅಂತರ ಕಾಯ್ದಕೊಂಡು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅವರನ್ನು ನಾವು ಹೋಂ ಕ್ವಾರಂಟೈನ್ ಮಾಡಲಾಗುವುದು. ಲಾಕ್‌ಡೌನ್‌ನಿಂದಾಗಿ ಊಟ, ಆಹಾರ ಸಾಮಗ್ರಿಗಾಗಿ ತೊಂದರೆ ಅನುಭವಿಸುತ್ತಿರುವವರು

ಪೊಲೀಸ್ ಠಾಣೆ, ತಾಲೂಕು ಕಚೇರಿ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಬಹುದು ಎಂದು ಹೇಳಿದರು.

ಜಿಪಂ ಸದಸ್ಯ ಅಪ್ಪಯ್ಯಣ್ಣ ಮಾತನಾಡಿ, ನಮ್ಮ ಹೋಬಳಿ ಸಮೀಪದ ಗೌರಿಬಿದನೂರು ತಾಲೂಕಿನಲ್ಲಿ ಸೋಂಕಿತರಿದ್ದು, ಯಾರೂ ಆ ಭಾಗಕ್ಕೆ ತೆರಳಬಾರದು ಎಂದು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷೆ ಸುಷ್ಮಾ ಮಂಜುನಾಥ್ ಮಾತನಾಡಿ, ಎಲ್ಲ ಹಳ್ಳಿಯಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳುತ್ತಿದ್ದೇವೆ. ಊರಿನ ಗ್ರಾಮಸ್ಥರು ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಈಗಾಗಲೇ ಪಂಚಾಯಿತಿಯಿಂದ ಮಾಸ್ಕ್ ವಿತರಿಸಲಾಗಿದೆ ಎಂದರು.

ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜು, ರಾಜಸ್ವ ನಿರೀಕ್ಷಕಿ ಲಕ್ಷ್ಮಮ್ಮ, ಗ್ರಾಪಂ ಸದಸ್ಯ ಟಿ.ವಿ. ವೆಂಕಟೇಶ್, ಮುನಿಕೃಷ್ಣಪ್ಪ, ಗಂಗರಾಜು, ಚಿಕ್ಕಪಿಳ್ಳಪ್ಪ, ಕಾರ್ಪೋರೇಷನ್ ಬ್ಯಾಂಕ್ ಮಾನ್ಯೇಜರ್ ಎಂ. ಸುರೇಶ್, ಪಿಡಿಒ ಕೃಷ್ಣಯ್ಯ ಇದ್ದರು.