ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಯತ್ನಾಳ ಗ್ರಾಮದಲ್ಲಿ ಯತ್ನಾಳ ಕೆರೆ ಪಾಟಾದಿಂದ ನೀನಾಬಾಯಿ ದೇವಸ್ಥಾನ(ತಾತೋಬಾ ವಸ್ತಿ) ವರೆಗೆ 250 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಕಾಮಾಬಾಯಿ ಗೋಪಗಿ, ಎಸ್.ಎಚ್. ನಾಡಗೌಡ, ರಾಜುಗೌಡ ಪಾಟೀಲ ಮತ್ತಿತರರಿದ್ದಾರೆ.  
ಜಿಲ್ಲೆ

ತುಬಚಿ-ಬಬಲೇಶ್ವರ ನನ್ನ ಕನಸಿನ ಯೋಜನೆ; ಸಚಿವ ಎಂ.ಬಿ. ಪಾಟೀಲ

ವಿಜಯಪುರ: ನನ್ನ ಕನಸಿನ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ, ಮುಖ್ಯ ಕಾಲುವೆ, ಶಾಖಾ ಕಾಲುವೆ ಮೂಲಕ 2013-18 ರ ಅವಧಿಯಲ್ಲಿಯೇ ನೀರು ಹರಿಸಿದ್ದರೂ, ಕಳೆದ ನಾಲ್ಕು ವರ್ಷಗಳಲ್ಲಿ ಹೊಲಗಾಲುವೆ ಮಾಡುವ ಕೆಲಸ ಹಿಂದಿನ ಸರ್ಕಾರ ಮಾಡಲಿಲ್ಲ. ಇದು ಅವರ ನೀರಾವರಿ ಕಳಕಳಿಯನ್ನು ತೋರುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಯತ್ನಾಳ ಗ್ರಾಮದಲ್ಲಿ ಯತ್ನಾಳ ಕೆರೆ ಪಾಟಾದಿಂದ ನೀನಾಬಾಯಿ ದೇವಸ್ಥಾನ(ತಾತೋಬಾ ವಸ್ತಿ) ವರೆಗೆ 250 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಅತ್ಯಂತ ಎತ್ತರದ ಕನಮಡಿ ಪ್ರದೇಶಕ್ಕೆ ನೀರೋದಗಿಸುವ ತುಬಚಿ-ಬಬಲೇಶ್ವರ ಯೋಜನೆ ನಾನೇ ರೂಪಿಸಿ, ಆರಂಭಿಸಿ 2 ವರ್ಷಗಳಲ್ಲಿ 3600 ಕೋಟಿ ರೂ. ಅನುದಾನ ನೀಡಿ, ನೀರು ಹರಿಸಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ 1 ಕಿಮೀ ಕಾಲುವೆ ಕೂಡ ಮಾಡಲಿಲ್ಲ. ಕಮೀಷನ್ ಹೊಡೆಯಲು ಹೊಲಗಾಲುವೆಗಳ ದೊಡ್ಡ ಪ್ಯಾಕೇಜ್ ಮಾಡಲು ಹೊರಟಿದ್ದರು. ಕೆಲವೇ ದಿನಗಳಲ್ಲಿ ಹೊಲಗಾಲುವೆಗಳ ಕುರಿತು ಟೆಂಡರ್ ಕರೆಯಲು ಕ್ರಮವಹಿಸಲಾಗುವುದು ಎಂದರು.

ಪಕ್ಕದ ರಾಜ್ಯದಲ್ಲಿಯೇ ಮಹಿಶ್ಯಾಳ ಯೋಜನೆ ಪ್ರಾರಂಭವಾಗಿ 50 ವರ್ಷ ಕಳೆದರೂ ಈವರೆಗೆ ನೀರು ಬಂದಿಲ್ಲ. ಆದರೆ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಯೋಜನೆಗಳನ್ನು ರೂಪಿಸಿ ನೀರು ಹರಿಸಿದ್ದೇವೆ. ರಾಜಸ್ಥಾನದ ಜೈಸಲ್ಮೇರ ಹಾಗೂ ಕರ್ನಾಟಕದ ವಿಜಯಪುರ ಅತ್ಯಂತ ಬರಗಾಲ ಪ್ರದೇಶ ಎಂದು ರಾಷ್ಟ್ರದಲ್ಲಿ ಹೆಸರು ಆಗಿದೆ. ಯುದ್ದದ ಸಂದರ್ಭದಲ್ಲಿ ಬಂಗಾರದಿಂದ ಇಂದಿರಾಗಾಂಧಿಯವರಿಗೆ ತುಲಾಭಾರ ಮಾಡಿ ಹೃದಯವಂತಿಕೆಯನ್ನು ಮೆರೆದ ಜಿಲ್ಲೆ ನಮ್ಮದು. ಆದರೆ, ಈ ಜಿಲ್ಲೆಯ ಅಭಿವೃದ್ಧಿಯಲ್ಲಿ ಬದಲಾವಣೆ ತಂದವರು ನಾವು ಎಂದರು.

ತುಬಚಿ-ಬಬಲೇಶ್ವರ ಹಾಗೂ ಅರಕೇರಿ ಏತ ನೀರಾವರಿ ಯೋಜನೆಗಳ ಮೂಲಕ ಜಾಲಗೇರಿ ಕೆರೆಗೆ ನೀರು ಹರಿಸಲು ಪ್ರತ್ಯೇಕ ಪೈಪ್‌ಲೈನ್ ಅಳವಡಿಸಿ, ಹೆಚ್ಚಿನ ನೀರು ಹರಿಸಲು ಕ್ರಮ ಜರುಗಿಸಲಾಗುವುದು. ಇದರಿಂದ ಜಾಲಗೇರಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುವುದು ಎಂದರು.

ತಿಕೋಟಾ ತಹಸೀಲ್ದಾರ್ ಪ್ರಶಾಂತ ಚನಗೊಂಡ, ತಿಕೋಟಾ ತಾಪಂ ಇಒ ಬಸವರಾಜ ಐನಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನ್ನವರ, ಗ್ರಾಪಂ ಅಧ್ಯಕ್ಷೆ ಕಾಮಾಬಾಯಿ ಗೋಪಗಿ, ಎಸ್.ಎಚ್. ನಾಡಗೌಡ, ರಾಜುಗೌಡ ಪಾಟೀಲ, ಕೋಪತ ಮಹಾರಾಜ, ಅಣ್ಣಪ್ಪ ದಳವಾಯಿ, ಅಪ್ಪಾಸಾಹೇಬಗೌಡ ಬಿರಾದಾರ, ರಮೇಶ ಗುಡದಿನ್ನಿ, ಗೀತಾಂಜಲಿ ಪಾಟೀಲ, ರಾಜು ಪವಾರ, ವಾಮನ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.