ತುಮಕೂರು : ಹಿಂದಿ ದಿವಸ್ ಆಚರಣೆ ವಿರೋಧಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ನೇತೃತ್ವದಲ್ಲಿ ಪ್ರತಿಭ ಟನಾನಿರತರು, ಸೆ.14 ರಂದು ಹಿಂದಿ ದಿವಸ್ ಆಚರಿಸುತ್ತಿರುವುದನ್ನು ಖಂಡಿಸಿದರಲ್ಲದೆ, ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿ ಹಿಂದಿ ಭಾಷೆ ಮೆರೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಮಾತೃಭಾಷೆ ಕನ್ನಡವನ್ನು ಕಗ್ಗೊಲೆ ಮಾಡುತ್ತಿದೆ. ನಮ್ಮ ತಾಯಿ ನಮಗೆ ಮುಖ್ಯ, ನಮ್ಮ ಮಾತೃಭಾಷೆ ನಮಗೆ ಮುಖ್ಯ. ಈಗಿನ ಕೇಂದ್ರ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕಪಕ್ಷೀಯವಾಗಿ ಒಕ್ಕೂಟದ ವ್ಯವಸ್ಥೆ ಇದೆ ಎಂಬುದನ್ನೂ ಮರೆತು, ರಾಜ್ಯದಲ್ಲಿ ಹಾಗೂ ಇಡೀ ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಕೇವಲ ಹಿಂದಿ ಭಾಷೆ ಮಾತನಾಡುವ ರಾಜ್ಯಗಳು ಸೇರಿ ಭಾರತ ದೇಶವಾಗಿಲ್ಲ. ಕನ್ನಡ, ತೆಲುಗು, ಮಲಯಾಳಂ, ಒರಿಸ್ಸಾ ಸೇರಿ ಪ್ರಾದೇಶಿಕ ಭಾಷೆಗಳ ಒಕ್ಕೂಟ ವ್ಯವಸ್ಥೆಯಿದ್ದು, ನಮ್ಮ ಹಕ್ಕುಗಳನ್ನು ಕಸಿದುಕೊಂಡು ಹಿಂದಿ ಭಾಷೆಗೆ ಪ್ರಾಧಾನ್ಯತೆ ಕೊಟ್ಟು ನಮ್ಮನ್ನು ಕತ್ತಲಲ್ಲಿಡುವ ಹುನ್ನಾರ ಮಾಡಲಾಗುತ್ತಿದೆ. ಇದನ್ನು ಕೂಡಲೇ ವಾಪಸ್ ಪಡೆಯಬೇಕು. ಹಿಂದಿ ಹೇರಿಕೆ ವಾಪಸ್ ಪಡೆಯದಿದ್ದರೆ 2023ಕ್ಕೆ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಮ್ಮದೇ ಸರ್ಕಾರ ಆಡಳಿತಕ್ಕೆ ಬರಲಿದ್ದು ಅಂದು ನಮ್ಮ ಭಾಷೆ, ನಮ್ಮ ಜಲ, ನೆಲವನ್ನು ಕಾಪಾಡಿಕೊಳ್ಳುತ್ತೇವೆ ಎಂದು ಗುಡುಗಿದರು.
ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ಬದಲು ಹಿಂದಿ ಭಾಷೆಗೆ ಒಲವು ತೋರಿಸುತ್ತಾ ರಾಜ್ಯದಲ್ಲೂ ಹಿಂದಿ ಭಾಷೆ ಹೇರಿಕೆ ಮಾಡುತ್ತಿರುವುದು ಖಂಡನೀಯ. ಕೂಡಲೇ ಹಿಂದಿ ದಿವಸ್ ಆಚರಣೆಯನ್ನು ವಾಪಸ್ ಪಡೆಯದಿದ್ದರೆ ತೀವ್ರ ರೀತಿಯ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಎಚ್ಚರಿಕೆ ನೀಡಿದರು.
ಬಿಜೆಪಿ ಈ ದೇಶದ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ಹುನ್ನಾರವನ್ನು ಮಾಡುತ್ತಿದೆ. 2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ತೇಜೋವಧೆ ಮಾಡಿ ಹಿಂದಿಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಪ್ರಾದೇಶಿಕತೆಯನ್ನು ಮರೆಮಾಚಿಸಿ ಸರ್ವಾಧಿಕಾರವನ್ನು ಮೆರೆಯಲು ಬಿಜೆಪಿ ಹೊರಟಿದೆ ಎಂದು ಜೆಡಿಎಸ್ ನಗಾರಾಧ್ಯಕ್ಷ ಬೆಳ್ಳಿಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಂತರ ಕಚೇರಿ ಸಹಾಯಕರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚಲುವರಾಜು, ರಾಮಾಂಜಿನಪ್ಪ, ಸೊಗಡು ವೆಂಕಟೇಶ್, ಸುಲ್ತಾನ್ ಮೊಹಮ್ಮದ್, ಕೆಂಪರಾಜು, ಉಪ್ಪಾರಹಳ್ಳಿ ಕುಮಾರ್, ಪ್ರಸನ್ನಕುಮಾರ್, ಉಮಾಶಂಕರ್, ಜಯಶ್ರೀ, ಲಕ್ಷ್ಮಮ್ಮ ಇದ್ದರು.