ಜಿಲ್ಲೆ

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧವಿಲ್ಲ

ರೇಷ್ಮೆ ನಗರ ಡೆಸ್ಕ್

ಬಿಡದಿ : ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲು ಹೊರಟಿರುವ ಬಿಡದಿ ಟೌನ್‌ಶಿಪ್‌ನ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಕೆಲವು ರಿಯಲ್ ಎಸ್ಟೇಟ್ ದಲ್ಲಾಳಿಗಳು ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ದಲಿತ ಮತ್ತು ಹಿಂದುಳಿದ ರೈತರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಶೇಖರ್ ಆರೋಪಿಸಿದರು.

ಮೇಡನಹಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನವಾದರೆ ಪ್ರತಿ ಎಕರೆಗೆ 4 ರಿಂದ 5 ಕೋಟಿ ರೂ. ಪರಿಹಾರ ಸಿಗುತ್ತದೆ. ಇದರಿಂದ ನಮ್ಮ ಸಮುದಾಯದವರಿಗೆ ಅನುಕೂಲವಾಗಲಿದೆ. ನಮ್ಮ ಭೂಮಿ ಅಂದರೆ ಯಾರು ಖರೀದಿ ಮಾಡಲು ಬರುವುದಿಲ್ಲ. ಹಾಗಾಗಿ ಭೂಸ್ವಾಧೀನವಾದರೆ ಜಮೀನಿಗೆ ಚಿನ್ನದ ಬೆಲೆ ಬರುತ್ತದೆ ಎಂದರು.

ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ತುಂಡು ಭೂಮಿ ಹೊಂದಿರುವ ದಲಿತರು ಮತ್ತು ಹಿಂದುಳಿದ ವರ್ಗದ ರೈತರು ಹೆಚ್ಚಾಗಿದ್ದಾರೆ. ಹಾಗಾಗಿ ಪ್ರತಿ ಎಕರೆಗೆ 5 ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ದಲಿತ ಸಮುದಾಯದ ರೈತರಿಗೆ ಸರ್ಕಾರದಿಂದ ಮಂಜೂರಾತಿ ಆಗಿರುವ ಜಮೀನುಗಳು ಈ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಭೂ ಸ್ವಾಧೀನ ಪ್ರಕ್ರಿಯೆಯಿಂದ ಸಣ್ಣ ಸಣ್ಣ ರೈತರಿಗೆ ಅನುಕೂಲವೇ ಹೊರತು ಅನನುಕೂಲ ಆಗುವುದಿಲ್ಲ. ಈಗ ಜಮೀನುಗಳ ಎಸ್.ಆರ್. ದರ ಕೇವಲ 25 ರಿಂದ 30 ಲಕ್ಷ ರೂ. ಇದೆ. ಅಲ್ಲದೆ. ಈ ಸಮುದಾಯದವರು ಹೊಂದಿರುವ ಜಮೀನು ಕೊಂಡುಕೊಳ್ಳುವವರು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ. ಹಾಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ನಮ್ಮ ವಿರೋಧವಿಲ್ಲ ಎಂದು ಹೇಳಿದರು.

ದಲ್ಲಾಳಿತನ ಮಾಡುತ್ತಿದ್ದಾರೆ: ದಲಿತ ಮೀಸಲಾತಿಯಿಂದ ಗೆದ್ದಿದ್ದ ತಾಪಂ ಮಾಜಿ ಸದಸ್ಯರಾಗಿ ಅಧಿಕಾರ ಅನುಭವಿಸಿವ ವ್ಯಕ್ತಿ ದಲಿತರ ಜಮೀನುಗಳನ್ನು ಸವರ್ಣೀಯರ ಜತೆಗೂಡಿ ದಲ್ಲಾಳಿಯಾಗಿ ನಿಂತು ಮಾರಾಟ ಮಾಡಿಸುತ್ತಿದ್ದಾರೆ. ಅಂಚಿಪುರ ಕಾಲನಿ ಗ್ರಾಮದಲ್ಲಿ ದಲಿತರ ಭೂಮಿಯನ್ನು ಒಂದು ಎಕರೆಗೆ 55 ಲಕ್ಷ ರೂ. ಗೆ ಹೊಸೂರು ಗ್ರಾಮದ ವ್ಯಕ್ತಿಗೆ ಕ್ರಯ ಮಾಡಿಸಿ ಅದೇ ಜಮೀನನ್ನು ಎಕರೆಗೆ 95 ಲಕ್ಷ ರೂ. ನಂತೆ ಮಾರಾಟ ಮಾಡಿದ್ದಾರೆ. ಹೀಗೆ ದಲಿತ ಕುಟುಂಬದ ಒಟ್ಟು ಮೂರು ಎಕರೆಯಷ್ಟು ಜಮೀನು ಮಾರಾಟ ಮಾಡಿಸಿ 1.20 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ಈಗಲೂ ಅವರು ರೈತರ ಜತೆಗೂಡಿ ಹೋರಾಟಕ್ಕೆ ನಿಂತಿರುವುದು ವ್ಯಾಪಾರಕ್ಕಾಗಿಯೇ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎಂದು ಶೇಖರ್ ಆರೋಪ ಮಾಡಿದರು.