ಬೆಂಗಳೂರು: ಬೆಳಗಾವಿಯಲ್ಲಿರುವ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಶುಭ ಸುದ್ದಿಯೊಂದನ್ನು ನೀಡಿದೆ. ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ತಿರುಪತಿ ವೆಂಕಟೇಶ್ವರನ ದೇವಾಲಯ ನಿರ್ಮಾಣಕ್ಕೆ ಟಿಟಿಡಿ ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಟಿಟಿಡಿ ಸದಸ್ಯ ನರೇಶ ಕುಮಾರ್, ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಈಗಾಗಲೇ 7 ಎಕರೆ ಖಾಸಗಿ ಜಾಗವನ್ನು ದೇವಾಲಯ ನಿರ್ಮಾಣಕ್ಕೆ ಮೀಸಲಾಗಿಡಲಾಗಿದೆ. ಬೆಳಗಾವಿ ಬಾಲಾಜಿ ಟ್ರಸ್ಟ್ ಹೆಸರಿನಲ್ಲಿರುವ ಈ ಭೂಮಿಯಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯ ನಿರ್ಮಾಣ ಮಾಡಲು ಇತ್ತೀಚೆಗೆ ನಡೆದ ಟಿಟಿಡಿ ಬೋರ್ಡ್ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ ಎಂದರು.
ಜಗತ್ತಿನ ಶ್ರೀಮಂತ ದೇವರು ಎಂದು ಪ್ರಸಿದ್ಧವಾಗಿರುವ ತಿರುಪತಿ ತಿಮ್ಮಪ್ಪನಿಗೆ ದೇಶದಾದ್ಯಂತ ಕೋಟ್ಯಾಂತರ ಭಕ್ತರಿದ್ದಾರೆ. ಎಷ್ಟೋ ಜನರಿಗೆ ತಿರುಪತಿಗೆ ಹೋಗಿ ದೇವರ ದರ್ಶನ ಮಾಡುವುದು ಅಸಾಧ್ಯವಾಗಿರುತ್ತದೆ. ಅಂತಹ ಭಕ್ತರಿಗೆ ಆಯಾ ಭಾಗದಲ್ಲಿ ವೆಂಕಟೇಶ್ವರ ದರ್ಶನ ಮಾಡಲು ಅನುಕೂಲ ಕಲ್ಪಿಸುವುದು ಟಿಟಿಡಿ ಉದ್ದೇಶ. ಬೆಂಗಳೂರಿನಲ್ಲಿರುವ ಟಿಟಿಡಿ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಜನ ಬಂದು ದರ್ಶನ ಮಾಡುತ್ತಾರೆ. ಅದೇ ರೀತಿ ಮಹಾರಾಷ್ಟ್ರ, ಗೋವಾ ರಾಜ್ಯಗಳ ಗಡಿಜಿಲ್ಲೆಯಾಗಿರುವ ಬೆಳಗಾವಿ ಭಾಗದಲ್ಲಿ ಟಿಟಿಡಿ ವೆಂಕಟೇಶ್ವರ ದೇವಾಲಯ ನಿರ್ಮಿಸುವುದರಿಂದ ಆ ಭಾಗದ ತಿರುಪತಿ ಭಕ್ತರಿಗೆ ಅನುಕೂಲವಾಗಲಿದೆ.
7 ಎಕರೆ ಪ್ರದೇಶದಲ್ಲಿ ಸುಮಾರು 100 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗುತ್ತದೆ. ಈಗಾಗಲೇ ಟಿಟಿಡಿ ಮಂಡಳಿ ಸಭೆಯಲ್ಲಿ ದೇವಾಲಯ ನಿರ್ಮಿಸುವ ಕುರಿತು ತೀರ್ಮಾನಿಸಲಾಗಿದ್ದು, ಟಿಟಿಡಿಯ ಶ್ರೀವಾಣಿ ಟ್ರಸ್ಟ್‌ನ ಹಣದಿಂದ ದೇವಾಲಯ ನಿರ್ಮಿಸಲಾಗುತ್ತದೆ. ಶೀಘ್ರದಲ್ಲಿ ಟಿಟಿಡಿ ನಿಯೋಗ ಸ್ಥಳ ಪರಿಶೀಲನೆ ನಡೆಸಿ ಬಹುತೇಕ ವರ್ಷಾಂತ್ಯದೊಳಗೆ ಕಾಮಗಾರಿ ಆರಂಭಿಸಲಾಗುವುದು. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ನರೇಶ್ ತಿಳಿಸಿದ್ದಾರೆ.