ಜಿಲ್ಲೆ

ಬೀದಿದೀಪ ಅಳವಡಿಕೆಯಲ್ಲಿ ಕಿರುಕುಳ ? : ಗುತ್ತಿಗೆದಾರ ಶ್ರೀ ಮಂಜು ಎಲೆಕ್ಟ್ರಿಕಲ್ಸ್ ಅಳಲು; ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗ

Tumakuru

ತುಮಕೂರು : ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಗರದಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಸುವ ಪ್ರಾಯೋಗಿಕ ಯೋಜನೆ (ಪೈಲೆಟ್ ಪ್ರಾಜೆಕ್ಟ್ ) ಜಾರಿಯಾದ ಆರಂಭದಿಂದಲೂ ಸಾಕಷ್ಟು ಅಡೆತಡೆಗಳು ಎದುರಾಗಿ ‘ಆರ್ಥಿಕ ಸಂಕಷ್ಟ’ಕ್ಕೆ ಸಿಲುಕಿರುವುದಾಗಿ ಆಯುಕ್ತರ ಬಳಿ ಗುತ್ತಿಗೆದಾರ ಸಂಸ್ಥೆ ಶ್ರೀ ಮಂಜು ಎಲೆಕ್ಟ್ರಿಕಲ್ಸ್ ಗೋಗರೆದಿರುವ ಅಂಶ ಬೆಳಕಿಗೆ ಬಂದಿದೆ.

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಸಾಮಾಜಿಕ ಹೋರಾಟಗಾರ ಇಮ್ರಾನ್ ಪಾಷ ಎಂಬುವವರು ಬೀದಿದೀಪ ಅಳವಡಿಸುವ ಕಾಮಗಾರಿ ಲೋಪ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ನೋಟಿಸ್ ನೀಡಿರುವ ಬಗ್ಗೆ ಕೇಳಿರುವ ಮಾಹಿತಿಯಲ್ಲಿ ‘ವಾರ್ಡ್‌ಗಳಲ್ಲಿ ಮುಕ್ತವಾಗಿ’ ಕೆಲಸ ಮಾಡುವ ವಾತಾವರಣ ಇಲ್ಲವೆಂದು ಸಮಜಾಯಿಷಿ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.

ಕಾರ್ಪೋರೇಟರ್‌ಗಳ ಕಿರುಕುಳವೇ?: ಬೀದಿದೀಪ ಅಳವಡಿಸುವ ಕರಾರು ಒಪ್ಪಂದವನ್ನು 2020ರ ಜನವರಿಯಲ್ಲಿ ಮಾಡಿಕೊಂಡಿರುವ ಶ್ರೀ ಮಂಜು ಎಲೆಕ್ಟ್ರಿಕಲ್ಸ್ ಮಾಲೀಕ ಎಚ್.ಕೆ.ಮಹಲಿಂಗಪ್ಪ ಅವರು ಪಾಲಿಕೆ ನೀಡಿದ್ದ 3 ನೋಟಿಸ್‌ಗಳಿಗೆ ನೀಡಿರುವ ಉತ್ತರದಲ್ಲಿ ಮುಕ್ತ ಅವಕಾಶವಿಲ್ಲದೆ ಇರುವ ಅಂಶವನ್ನು ಪ್ರಸ್ತಾಪಿಸಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ. ಇದರ ಹಿಂದೆ ಕಾರ್ಪೋರೇಟರ್‌ಗಳು ಕಮಿಷನ್‌ಗೆ ಒತ್ತಾಯಿಸಿ ಕಿರುಕುಳ ನೀಡಿದ್ದರೆ ಎಂಬುದು ಮುನ್ನೆಲೆಗೆ ಬಂದಿದೆ.

ಕೆಲಸ ಆರಂಭವಾದಾಗಿನಿಂದ ಒಂದಲ್ಲಾ ಒಂದು ಅಡೆತಡೆ ಇದ್ದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹಾಗಾಗಿ, ಉಳಿದ ವಾರ್ಡ್‌ಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮಾರ್ಗದರ್ಶನ, ಸಹಕಾರ ನೀಡುವಂತೆ ಸಮಜಾಯಿಷಿ ನೀಡಿರುವ ಪತ್ರದಲ್ಲಿ ನೊಂದುಕೊಂಡಿರುವುದು ಕಾರ್ಪೋರೇಟರ್‌ಗಳತ್ತ ಬೊಟ್ಟು ಮಾಡುವಂತಿದೆ.

ಮೌನಕ್ಕೆ ಶರಣಾದ ಕಾರ್ಪೋರೇಟರ್‌ಗಳು : ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ಬೀದಿದೀಪ ಅಳವಡಿಸುವ ಪ್ರಾಯೋಗಿಕ ಯೋಜನೆಗೆ ಸ್ಮಾರ್ಟ್‌ಸಿಟಿ ಮೂಲಕ ಆಹ್ವಾನಿಸಲಾಗಿದ್ದ ಟೆಂಡರ್ ಅನ್ನು ವೈಟ್ ಪ್ಲೆಕಾರ್ಡ್ ಟೆಕ್ನಾಲಜೀಸ್ ಸಂಸ್ಥೆ ಅಡಿ ಕೊರಟಗೆರೆಯ ಶ್ರೀ ಮಂಜು ಎಲೆಕ್ಟ್ರಿಕಲ್ಸ್ ಪಡೆದಿತ್ತು. ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಟೆಂಡರ್ ಒಪ್ಪಂದ ನಿಯಮಗಳನ್ನೇ ಗಾಳಿಗೆ ತೂರಲಾಗಿದ್ದು ಇದರಲ್ಲಿ ಗೋಲ್ ಮಾಲ್ ನಡೆದಿರುವುದೆಂದು ಕಳೆದ ನವೆಂಬರ್‌ನಲ್ಲಿ ಪಾಲಿಕೆ ಕಾರ್ಪೋರೇಟರ್‌ಗಳಾದ ಜೆ.ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸುದ್ದಿಗೋಷ್ಠಿಯಲ್ಲಿ ದಾಖಲೆ ಸಮೇತ ಆರೋಪ ಮಾಡಿದ್ದರು. ಬಳಿಕ ಈ ಕಾರ್ಪೋರೇಟರ್‌ಗಳು ಮೌನಕ್ಕೆ ಶರಣಾಗಿರುವುದೂ ಸಹ ಹಲವು ಗುಮಾನಿಗಳನ್ನು ಹುಟ್ಟುಹಾಕಿದೆ.

ಬೀದಿದೀಪ ಅಳವಡಿಕೆ ಟೆಂಡರ್‌ನಲ್ಲಿ ಗೋಲ್ ಮಾಲ್ ನಡೆದಿರುವ ಬಗ್ಗೆ ಪ್ರಧಾನಮಂತ್ರಿ ಕಚೇರಿ, ಕೇಂದ್ರ ವಿಚಕ್ಷಣಾ ಇಲಾಖೆ, ಕೇಂದ್ರ ಸಚಿವರಿಗೆ ದಾಖಲೆ ಸಮೇತ ದೂರ ನೀಡಿದ್ದು ಕೇಂದ್ರ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಸ್ಮಾರ್ಟ್‌ಸಿಟಿ ನೋಡಲ್ ಏಜೆನ್ಸಿಗೆ ಕ್ರಮಕೈಗೊಳ್ಳಲು ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಜೆ.ಕುಮಾರ್, ವಿಪಕ್ಷ ನಾಯಕ, ಪಾಲಿಕೆ