ಶಿರಸಿ: ಜಿಲ್ಲೆಯ ಅಡಕೆ ಬೆಳೆಗಾರರ ಜೀವನಾಡಿ ಸಂಸ್ಥೆಯಾದ ಟಿಎಸ್ಎಸ್ ಈ ವರ್ಷ 20 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸಿಬ್ಬಂದಿ ವರ್ಗದವರ ದುಡಿಮೆ, ಸದಸ್ಯರು ಮತ್ತು ಗ್ರಾಹಕರ ಪರಿಶ್ರಮದಿಂದಾಗಿ ಈ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಂಘದಲ್ಲಿ ಈ ಹಿಂದಿನ ಆಡಳಿತ ಮಂಡಳಿ, ಕೆಲ ಸಿಬ್ಬಂದಿಯ ದೋಷದಿಂದಾಗಿ ಸಾಕಷ್ಟು ಹಣದ ಅವ್ಯವಹಾರ, ದುರುಪಯೋಗವಾಗಿತ್ತು. ಮೂವರಿಗೆ 113 ಕೋಟಿ ರೂ. ಬೇಕಾಯ್ದೆಯಾಗಿ ಸಾಲ ನೀಡಿದ್ದನ್ನೂ ಒಳಗೊಂಡಂತೆ 123 ಕೋಟಿ ರೂ. ಹಾನಿ ಆಗಿದೆ. ಆ ನಂತರ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಕಳೆದ ವರ್ಷ ಸಂಸ್ಥೆ 8 ಕೋಟಿ ರೂ. ಲಾಭ ಗಳಿಸಿತ್ತು. ವಿವಿಧ ನಿಧಿಗಳನ್ನು ತೆಗೆದ ಬಳಿಕ 8 ಲಕ್ಷ ರೂ. ನಿವ್ವಳ ಲಾಭ ಉಂಟಾಗಿತ್ತು. ಲಾಭ ನಿಧಿಗಳನ್ನು ತೆಗೆದ ಬಳಿಕ 8 ಲಕ್ಷ ರೂ. ನಿಕ್ಕಿ ಲಾಭ ಆಗಿತ್ತು. ಈ ವರ್ಷ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಿದೆ ಎಂದರು.
ಸಂಸ್ಥೆಯಲ್ಲಿ 749 ಕೋಟಿ ರೂ. ದುಡಿಯುವ ಬಂಡವಾಳವಿದ್ದು, ಕಳೆದ ಸಾಲಿನಲ್ಲಿ 1450 ಕೋಟಿ ರೂ. ವ್ಯವಹಾರ ನಡೆಸಿದೆ. 100 ಕೋಟಿ ರೂ. ಗಳಷ್ಟು ಸದಸ್ಯರ ಹಣವನ್ನು ಠೇವಣಿ ಇಟ್ಟಿದ್ದೇವೆ. ಬೆಳೆ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ಸದಸ್ಯರಿಗೆ ನೀಡುವ ಸಲುವಾಗಿ 254 ಕೋಟಿ ರೂ.ಗಳ ಸಾಲ ಪಡೆದಿದ್ದೇವೆ. ಸಂಸ್ಥೆಯಲ್ಲಿ ಸದಸ್ಯರು 2.56 ಸಾವಿರ ಕ್ವಿಂಟಾಲ್ನಷ್ಟು ಅಡಕೆ ದಾಖಲೆಯ ವಿಕ್ರಿ ಆಗಿದೆ. ಅಡಕೆ ವಹಿವಾಟು ಕಳೆದ ವರ್ಷಕ್ಕಿಂತ 18 ಸಾವಿರ ಕ್ವಿಂಟಾಲ್ ಜಾಸ್ತಿ ಆಗಿದೆ. ಜಿಲ್ಲೆಯಲ್ಲಿ 5 ಲಕ್ಷ ಕ್ವಿಂಟಾಲ್ಗಳಷ್ಟು ಅಡಕೆ ಉತ್ಪಾದನೆ ಇದ್ದರೂ ಈ ಪೈಕಿ ಶೇ. 53ರಷ್ಟು ಅಡಕೆ ಟಿಎಸ್ಎಸ್ ಸಂಸ್ಥೆಯ ಮೂಲಕವೇ ಮಾರಾಟವಾಗುತ್ತಿದೆ ಎಂದರು. ಸಂಘ ಕಳೆದ ಒಂದು ವರ್ಷದ ಅವಧಿಯಲ್ಲಿ ಒಟ್ಟಾರೆಯಾಗಿ 55 ಕೋಟಿ ರೂ. ತೆರಿಗೆ, 4.98 ಕೋಟಿ ಸೆಸ್ ತುಂಬಿದೆ ಎಂದರು.
ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ನಿರ್ದೇಶಕರಾದ ರವೀಂದ್ರ ಹೆಗಡೆ, ಕೃಷ್ಣ ಹೆಗಡೆ, ನಿರ್ಮಲಾ ಭಟ್, ಅಗಸಾಲ, ಅಶೋಕ ಹೆಗಡೆ,ಪುರುಷೋತ್ತಮ ಹೆಗಡೆ, ವ್ಯವಸ್ಥಾಪಕ ಗಿರೀಶ ಹೆಗಡೆ ಇತರರಿದ್ದರು.
ಸಾಲ ನೀಡದ ಕೆಡಿಸಿಸಿ
ರೈತರಿಗೆ ಬೆಳೆ ಸಾಲ ವಿತರಿಸುವ ಸಲುವಾಗಿ ಕೆಡಿಸಿಸಿ ಬ್ಯಾಂಕ್ಗೆ 200 ಕೋಟಿ ರೂ. ಸಾಲಕ್ಕಾಗಿ ಮನವಿ ಮಾಡಿದ್ದೆವು. ಆದರೆ, ಕೆಡಿಸಿಸಿ ಒಂದು ರೂ. ಸಹ ಸಾಲ ಮಂಜೂರು ಮಾಡಿಲ್ಲ. ಸಂಸ್ಥೆಯದೇ 85 ಕೋಟಿ ರೂ. ಕೆಡಿಸಿಸಿ ಬ್ಯಾಂಕ್ನಲ್ಲಿ ಠೇವಣಿ ಇದ್ದರೂ ನಮಗೆ ಸಾಲ ಮಂಜೂರು ಮಾಡಿಲ್ಲ. ಆದರೆ, ರೈತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸಂಸ್ಥೆ ತನ್ನ ಸ್ವಂತ ಬಂಡವಾಳದಿಂದ 92 ಕೋಟಿ ರೂ.ಗಳಷ್ಟನ್ನು ರೈತರ ಸಾಲಕ್ಕೆ ಬಳಕೆ ಮಾಡಿದೆ ಎಂದು ಪ್ರಶ್ನೆಯೊಂದಕ್ಕೆ ಗೋಲಾಕೃಷ್ಣ ವೈದ್ಯ ಉತ್ತರಿಸಿದರು.
ಮುಂಡಗೋಡಿನಲ್ಲಿ ಹಸಿ ಅಡಕೆ ಖರೀದಿ ಕೇಂದ್ರವನ್ನು ಟಿಎಸ್ಎಸ್ ಶೀಘ್ರದಲ್ಲಿ ಆರಂಭಿಸಲಿದೆ. ಸಿಹಿ ಅಡಕೆ ಪುಡಿಯನ್ನು ಹೊರ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಳಿಸಲು ನಿರ್ಧರಿಸಿದ್ದೇವೆ. ನಾಗ್ಪುರದಲ್ಲಿ ಶೀಘ್ರವೇ ಶಾಖೆ ಆರಂಭಿಸಲಿದ್ದೇವೆ. | ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷರು, ಟಿಎಸ್ಎಸ್ ಶಿರಸಿ