ಹಳಿಯಾಳ: ಹುಲಿಯ ತಲೆಯ ಸಮೇತ ಚರ್ಮವನ್ನು ಮಾರಲು ಯತ್ನಿಸುತ್ತಿದ್ದ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳವು ಬುಧವಾರ ಹಳಿಯಾಳ ಪಟ್ಟಣದಲ್ಲಿ ಬಂಧಿಸಿದೆ. ಹಳಿಯಾಳದ ತಿಳಕ ರಸ್ತೆಯ ನಿವಾಸಿ ಮಹಾದೇವ ನಾರಾಯಣ ತೇರಗಾಂವಕರ (55) ಬಂಧಿತ ಆರೋಪಿಯಾಗಿದ್ದು, ಈತನಿಂದ ತಲೆಸಮೇತ ಹುಲಿಯ ಚರ್ಮ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಹುಲಿಯ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳವು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಪಟ್ಟಣದ ಐಬಿ ರಸ್ತೆಯಲ್ಲಿ ನಾಗಜರಿ ಕ್ರಾಸ್ ಬಳಿ ಚರ್ಮ ಮಾರಾಟ ಮಾಡಲು ತಂದಾಗ ಖರೀದಿದಾರರ ಸೋಗಿನಲ್ಲಿ ಬಂದ ಪೊಲೀಸ್ ಅರಣ್ಯ ಸಂಚಾರಿ ದಳದ ತಂಡವು ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಮಾರ್ಚ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ಆರ್. ಶೋಭಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಎಚ್. ದೇವರಾಜ್, ಸಿ.ಎಚ್. ಕೃಷ್ಣರಾಜ್ ಅರಸ್, ಡಿ.ಎಚ್. ದಿನೇಶ್, ಹೇಮಾವತಿ, ತಿಮ್ಮಶೆಟ್ಟಿ ಹಾಗೂ ವಾಹನ ಚಾಲಕರು ಇದ್ದರು.
ಈ ಪ್ರಕರಣದ ತನಿಖೆಯನ್ನು ಹಳಿಯಾಳ ಅರಣ್ಯ ವಲಯಕ್ಕೆ ವಹಿಸಲಾಗಿದೆ. ಹುಲಿಗಳ ಚರ್ಮ ಹಾಗೂ ಅಂಗಾಂಗಗಳ ಕಳ್ಳಸಾಗಾಣಿಕೆ ಮಾರಾಟ ಜಾಲವು ರಾಜ್ಯದ ತುಂಬ ಹರಡಿದೆ. ಈ ನಿಟ್ಟಿನಲ್ಲಿ ಹಳಿಯಾಳದಲ್ಲಿ ಕಂಡು ಬಂದ ಈ ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು. ಹುಲಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
| ಮಹೇಶ ಹಿರೇಮಠ ಹಳಿಯಾಳ ವಲಯ ಅರಣ್ಯಾಧಿಕಾರಿ